ಮಡಿಕೇರಿ: ರಾಜ್ಯದಲ್ಲಿ ಡ್ರಗ್ ಮಾಫಿಯಾ ವಿರುದ್ಧ ಸರ್ಕಾರ ಸಮರ ಸಾರಿದ್ದು, ಯಾವುದೇ ಪಕ್ಷದ ಎಷ್ಟೇ ಪ್ರಭಾವಿಗಳು ಇದ್ದರೂ ಮುಲಾಜಿಲ್ಲದೆ ಅಂತಹವರನ್ನು ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ತಳ್ಳಬೇಕು ಎಂದು ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿಗೆ ಸಮೀಪದ ಬಲಮುರಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವಿವಿಧ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಗಾಂಜಾ ಮತ್ತು ಡ್ರಗ್ಸ್ ಮಾಫಿಯವನ್ನು ಮಟ್ಟ ಹಾಕಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಮಾಫಿಯಾದಲ್ಲಿ ಶಾಮೀಲಾಗಿರುವ ಹಾಗೂ ಗಾಂಜಾ ಬೆಳೆಸುವವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಈಗ ಬಂಧಿತರಾಗಿರುವ ಸಿನಿಮಾ ನಟಿಯರು ಕೇವಲ ಐದಾರು ಚಿತ್ರಗಳಲ್ಲಿ ನಟಿಸಿದ್ದರೂ ಕೋಟಿಗಟ್ಟಲೆ ಆಸ್ತಿ ಸಂಪಾದನೆ ಮಾಡಿದ್ದಾರೆ . ಈ ಆಸ್ತಿ ಇವರ ಅಪ್ಪನ ಮನೆಯಿಂದ ಬಂದದ್ದೇ ಎಂದು ಆಕ್ರೋಶ ವ್ಯಕ್ತಪಡಿಸಿದ ರಂಜನ್, ಅವರ ನಿಯಮ ಬಾಹಿರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು.
ಡ್ರಗ್ ಮಾಫಿಯಾದ ಬಗ್ಗೆ ಕೆಲವು ಪೊಲೀಸರಿಗೆ ಖಂಡಿತಾ ತಿಳಿದಿತ್ತು. ಆದರೆ ಇಂತಹ ಕಳ್ಳ ಪೊಲೀಸರಿಂದ ಡ್ರಗ್ ಮಾಫಿಯಾ ಬೆಳಕಿಗೆ ಬಂದಿರಲಿಲ್ಲ ಎಂದು ಹೇಳಿದ ಅವರು, ಕೊಡಗು ಜಿಲ್ಲೆಯಲ್ಲೂ ಗಾಂಜಾ ಬೆಳೆಯುವವರು ಮತ್ತು ಗಾಂಜಾ ಮಾರಾಟಗಾರರನ್ನು ಬಗ್ಗುಬಡಿಯಲಾಗುತ್ತದೆ ಎಂದು ನುಡಿದರು.
ಸರಳ ದಸರಾ: ಮಡಿಕೇರಿ ದಸರಾ ಸಂಬಂಧಿಸಿದಂತೆ ಸಭೆ ನಡೆದಿಲ್ಲ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಬೇಕಿದೆ ಎಂದು ಅವರು ಅಭಿಪ್ರಾಯಿಸಿದರು