ಮಡಿಕೇರಿ : ಡ್ರಗ್ಸ್ ವಿಚಾರದಲ್ಲಿ ಪರಸ್ಪರ ದೂಷಿಸುವುದನ್ನು ಬಿಟ್ಟು ಅದರ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಸಂಸದ ಪ್ರತಾಪ್ಸಿಂಹ ಅವರು ಅಭಿಪ್ರಾಯಪಟ್ಟರು.
ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಸಂಬಂಧಿಗಳು,ಸಿನಿಮಾ ನಟ-ನಟಿಯರು ಯಾರೇ ಭಾಗಿಯಾಗಿದ್ದರೂ ಅವರಿಗೆ ಕಾನೂನಿನಡಿ ಶಿಕ್ಷೆಯಾಗಲೇಬೇಕು ಎಂದು ಹೇಳಿದ ಅವರು, ಈ ಕುರಿತು ವಿರೋಧ ಪಕ್ಷಗಳು ದೂಷಣೆ ಮಾಡುವುದನ್ನು ಬಿಟ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರ ನೀಡಬೇಕು ಎಂದು ಸಲಹೆ ಮಾಡಿದರು.
ಇಲ್ಲಿಗೆ ಸಮೀಪದ ಬಲಮುರಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವಿವಿಧ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಂದರ್ಭ ಪತ್ರಕರ್ತರು ಗಮನಸೆಳೆದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಡಿಕೇರಿ ದಸರಾ ಸಂಬಂಧಿಸಿದಂತೆ ಯಾವುದೇ ತೀರ್ಮಾನವಾಗಿಲ್ಲ. ಆದರೆ ಸರಳವಾಗಿ ಆಚರಿಸಬೇಕಿದೆ. ಕೋವಿಡ್-19 ಇರುವುದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಪ್ರತಾಪ್ ಸಿಂಹ ಅವರು ನುಡಿದರು.
ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.