ದಿಗಂತ ವರದಿ ಮೈಸೂರು:
ತನ್ನ ತಂಗಿಯ ಮಾಂಗಲ್ಯ ಸರವನ್ನೇ ಕಳುವು ಮಾಡಿದ್ದ ಅಣ್ಣನೊಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ನಡೆದಿದೆ.
ಹೂಟಗಳ್ಳಿ ನಿವಾಸಿ ಸಂತೋಷ್ ಕುಮಾರ್ (33) ಬಂಧಿತ ಆರೋಪಿ ಈತನಿಂದ 30 ಗ್ರಾಂ ತೂಕದ 3.50 ಕ್ಷರೂ.ಮೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಣ್ಣ ತಂಗಿ ಇಬ್ಬರೂ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಬಳಿ ಇರುವ ಬಟ್ಟೆ ಅಂಗಡಿಗೆ ಬಂದು, ಖರೀದಿಸಿದ ಬಳಿಕ ವಾಪಸ್ ಮನೆಗೆ ಹೋಗಿದ್ದಾರೆ. ವ್ಯಾನಿಟಿ ಬ್ಯಾಗ್ ಪರಿಶೀಲಿಸಿದ ತಂಗಿಗೆ ಮಾಂಗಲ್ಯ ಸರ ನಾಪತ್ತೆಯಾಗಿರುವುದು ಕಂಡು ಬಂದಿದ್ದು, ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಜರ್ಬಾದ್ ಠಾಣೆ ಪೊಲೀಸರು, ವಿಚಾರಣೆ ನಡೆಸಿದಾಗ ಆ ಮಹಿಳೆಯು ಕೆಲಕಾಲ ವ್ಯಾನಿಟಿ ಬ್ಯಾಗ್ನ್ನು ಅಣ್ಣನ ಬಳಿ ನೀಡಿದ್ದ ಬಗ್ಗೆ ಮಾಹಿತಿ ನೀಡಿದ್ದಾಳೆ. ಸಂತೋಷ್ ಕುಮಾರ್ನ ಮೇಲೆ ಅನುಮಾನಗೊಂಡ ಪೊಲೀಸರು ಹಿನಕಲ್ ಸಿಗ್ನಲ್ ಬಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಕಾರ್ಯಾಚರಣೆಯಲ್ಲಿ ನಜರ್ ಬಾದ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಜಿ.ಎನ್.ಶ್ರೀಕಾಂತ್, ಸಬ್ ಇನ್ಸಪೆಕ್ಟರ್ ಎಂ.ಎಲ್ ಸಿದ್ದೇಶ್, ಎಎಸ್ ಐ ಕೃಷ್ಣ ಹಾಗೂ ಸಿಬ್ಬಂದಿಗಳಾದ ಹೆಚ್.ಮಧುಕೇಶ್, ಬಿ.ವಿ.ಪ್ರಕಾಶ್, ಪಿ.ಚೇತನ್, ಸಂದೇಶ್ ಕುಮಾರ್, ಕಿರಣ್ ರಾಥೋಡ್, ಚೇತನ್ , ಸೌಮ್ಯ ಪಾಲ್ಗೊಂಡಿದ್ದರು.