ಹೊಸ ದಿಗಂತ ವರದಿ, ಮೈಸೂರು:
ಕಳೆದ ಒಂದು ವಾರದ ಹಿಂದೆಯಷ್ಟೇ ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಡ್ಡಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದ ದುಷ್ಕರ್ಮಿಗಳು, ವಾರದ ಬಳಿಕ ಆತನ ಮಗನನ್ನು ಕೂಡ ಹತ್ಯೆ ಮಾಡಿದ್ದಾರೆ. ಹಾಡಹಗಲೇ ಇಂತಹದೊoದು ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಮೈಸೂರು ತಾಲೂಕಿನ ಮಂಡಕಳ್ಳಿ ಗ್ರಾಮದ ಮರಿಕೋಟೆ ಗೌಡರ ಪುತ್ರ ಸತೀಶ್(25) ಕೊಲೆಯಾದವ. ಆಸ್ತಿ ವಿಚಾರವಾಗಿ ಕುಟುಂಬಿಕರಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು. ಈ ಹಿನ್ನಲೆಯಲ್ಲಿ ತಂದೆ ಹಾಗೂ ಮಗನನ್ನು ಕೊಲೆಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಜ.2 ರಂದು ಮೈಸೂರಿನ ಮಹದೇವಪುರದಿಂದ ಹೋಗುವಾಗ ಮಂಡಕಳ್ಳಿoದ ಮುಕ್ಕಾಲು ಕಿ.ಮೀ ಮುಂದೆ ಇರುವ ಕಾಲುವೆ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಮರಿಗೌಡ (48) ಎಂಬಾತನನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ತೀವ್ರವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದರು.
ಇಂದು ಬೆಳಗ್ಗೆ ಕೊಲೆಗೀಡಾದ ಮರಿಗೌಡರ ಮಗ ಸತೀಶ್ ಎಂಬಾತನ ಮೇಲೆ ಹಾಡ ಹಗಲೇ ದಾಳಿ ಮಾಡಿರುವ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬರುತ್ತಿದ್ದ ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.