ಹೊಸ ದಿಗಂತ ವರದಿ, ಮಂಗಳೂರು:
ನಗರದಲ್ಲಿ ನ.5ರಂದು ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮತ್ತು ಸಾರ್ವಜನಿಕರಲ್ಲಿ ಬಿಜೆಪಿ ಬಗ್ಗೆ ವಿಶ್ವಾಸ ಮೂಡಿಸಿದೆ. ಇದರಿಂದ ವಿಚಲಿತರಾಗಿರುವ ಶಾಸಕ ಯು.ಟಿ. ಖಾದರ್ ಅವರು ಕಾರ್ಯಕಾರಿಣಿಯನ್ನು ಟೀಕಿಸಿದ್ದಾರೆ. ತನ್ನ ಭ್ರಷ್ಟಾಚಾರ ಮರೆಮಾಚಲು ಖಾದರ್ ಬಿಜೆಪಿಯನ್ನು ದೂರುತ್ತಿದ್ದಾರೆ ಎಂದು ಬಿಜೆಪಿ ದ.ಕ. ಜಿಲ್ಲಾ ಘಟಕ ಹೇಳಿದೆ.
ಇದೀಗ ಜಿಲ್ಲೆಯಲ್ಲಿ ಮತ್ತು ಖಾದರ್ ಪ್ರತಿನಿಧಿಸುವ ಮಂಗಳೂರು ಕ್ಷೇತ್ರದಲ್ಲಿ ಜನರು ಗುಂಪು ಸೇರಿದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವುದು ಖಾದರ್ ಅವರ ಆಡಳಿತ ಅವಧಿಯ ಭ್ರಷ್ಟಾಚಾರದ ಕುರಿತು. ಈ ವಿಚಾರ ಖಾದರ್ ಗಮನಕ್ಕೂ ಬಂದಿದೆ. ಇದನ್ನು ಜನರಿಂದ ಮರೆಮಾಚಲು ದಿನಬೆಳಗಾದರೆ ಬಿಜೆಪಿ ವಿರುದ್ಧ ಸುದ್ದಿಗೋಷ್ಠಿ ನಡೆಸುತ್ತಿರುವುದು ಬಿಟ್ಟರೆ ಇವರಿಗೆ ಬೇರೆ ದಾರಿ ಇಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಧಾಕೃಷ್ಣ ಮಂಗಳೂರು ಹೇಳಿದ್ದಾರೆ.
ಈ ನಡುವೆ ಮಾಜಿ ಸಚಿವ ರಮಾನಾಥ ರೈ ಮತ್ತು ಖಾದರ್ ನಡುವಿನ ಸಂಬಂಧ ಹಳಸಿದ್ದು, ಜಗಳ ತಾರಕಕ್ಕೇರಿದೆ. ಇದರಿಂದಾಗಿ ಮಂಗಳೂರು ಕ್ಷೇತ್ರ ಖಾದರ್ ಕೈ ತಪ್ಪುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಈ ಎಲ್ಲ ಕಾರಣಗಳಿಂದ ಖಾದರ್ಗೆ ಸೋಲಿನ ಭೀತಿ ಎದುರಾಗಿದೆ. ಬಿಜೆಪಿ ಕಾರ್ಯಕಾರಿಣಿಯಲ್ಲಿ ಉತ್ತಮ ಸಮಾಜಮುಖಿ ನಿರ್ಣಯಗಳಾಗಿವೆ. ಅದರಲ್ಲಿ ಕರಾವಳಿ ಅಭಿವೃದ್ಧಿ ಮತ್ತು ಪಶ್ಚಿಮ ವಾಹಿನಿಗೆ ಹೆಚ್ಚಿನ ಸಂಪನ್ಮೂಲ ಸಿಗಲಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಲಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವುದರಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯ ಮೂಡಲಿದೆ. ಇದು ಖಾದರ್ಗೆ ಬೇಕಾಗಿಲ್ಲ. ಅವರು ಈ ಹಿಂದೆ ಸಿ.ಎ.ಎ. ಬಗ್ಗೆ ಮಾತನಾಡುವಾಗ ಜಿಲ್ಲೆಗೆ ಬೆಂಕಿ ಬೀಳಬಹುದು ಎಂದು ಹೇಳಿಕೆ ನೀಡುವ ಮೂಲಕ ಮಂಗಳೂರು ಗೋಲಿಬಾರ್ ಘಟನೆಗೆ ಕಾರಣರಾದವರು.
ಯು.ಟಿ.ಖಾದರ್ ಅವರ ಬಗ್ಗೆ ಜಿಲ್ಲೆಯಲ್ಲಿ ಜನರು ದಿನದಿಂದ ದಿನಕ್ಕೆ ವಿಶ್ವಾಸ ಕಳೆದುಕೊಂಡು ಅವರ ವಿರುದ್ಧ ಆಕ್ರೋಶಿತರಾಗಿದ್ದಾರೆ. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಯು.ಟಿ.ಖಾದರ್ ಸೋಲು ಖಚಿತ ಎಂದು ರಾಧಾಕೃಷ್ಣ ಮಂಗಳೂರು ಭವಿಷ್ಯ ನುಡಿದಿದ್ದಾರೆ.