Sunday, June 26, 2022

Latest Posts

ತಮಿಳುನಾಡಿನ ಸಂಸ್ಕೃತಿ, ಭಾಷೆ, ಜನರ ಬಗ್ಗೆ ಪ್ರಧಾನಿ ಮೋದಿಗೆ ಗೌರವವಿಲ್ಲ: ರಾಹುಲ್‌ ಗಾಂಧಿ ಟೀಕೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಮಿಳುನಾಡಿನ ಸಂಸ್ಕೃತಿ, ಭಾಷೆ, ಜನರ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಗೌರವ ಇಲ್ಲ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.
ತಮಿಳುನಾಡು ವಿಧಾನಸಭೆಗೆ ಏಪ್ರಿಲ್​-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಇಂದು ತಮಿಳುನಾಡಿಗೆ ತೆರಳಿದ್ದು, ಜನವರಿ 25ರವರೆಗೆ ಅಂದರೆ ಮೂರು ದಿನ ಅಲ್ಲಿಯೇ ಇದ್ದು, ಪ್ರಚಾರ ಮಾಡಲಿದ್ದಾರೆ. ಮೊದಲ ದಿನವಾದ ಇಂದು ಕೊಯಂಬತ್ತೂರಿನಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಹಲವು ಭಾಷೆ, ಸಂಸ್ಕೃತಿಗಳು ಇವೆ. ತಮಿಳು, ಹಿಂದಿ, ಬೆಂಗಾಳಿ ಸೇರಿ ಎಲ್ಲ ಭಾಷೆಗಳಿಗೂ ಗೌರವ, ಅವಕಾಶ ಇದೆ. ಆದರೆ ಪ್ರಸ್ತುತ ಭಾರತದಲ್ಲಿ ಒಂದು ಭಾಷೆ, ಒಂದು ಸಂಸ್ಕೃತಿ ಎಂಬ ಪರಿಕಲ್ಪನೆಯನ್ನು ಹೇರಲು ಪ್ರಯತ್ನಿಸಲಾಗುತ್ತಿದೆ. ಅದರ ವಿರುದ್ಧ ನಾವು ಹೋರಾಟ ನಡೆಸಿದ್ದೇವೆ. ತಮಿಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಜನರ ಬಗ್ಗೆ ಮೋದಿಗೆ ಗೌರವವಿಲ್ಲ. ತಮಿಳು ಜನರು, ಭಾಷೆ ಮತ್ತು ಸಂಸ್ಕೃತಿ ಅವರ ಪರಿಕಲ್ಪನೆಗೆ ಅಧೀನವಾಗಿರಬೇಕೆಂದು ಮೋದಿ ಬಯಸುತ್ತಾರೆ ಎಂದು ರಾಹುಲ್‌ ಹೇಳಿದ್ದಾರೆ.
ತಮಿಳುನಾಡು ದೇಶದ ಮುಂಚೂಣಿ ರಾಜ್ಯವಾಗಿದ್ದು, ಭಾರತಕ್ಕೆ ಉತ್ಪಾದನೆ, ಕೈಗಾರಿಕೀಕರಣ ಮತ್ತು ಉದ್ಯೋಗದ ಅಗತ್ಯವಿದೆ. ಭಾರತದ ಉಳಿದ ರಾಜ್ಯಗಳು ತಮಿಳುನಾಡಿನಿಂದ ಕಲಿಯಲು ಬಹಳಷ್ಟಿದೆ ಎಂದು ಅವರು ಪ್ರಶಂಸಿಸಿದ್ದಾರೆ.
‘ತಮಿಳುನಾಡಿನೊಂದಿಗಿನ ನನ್ನ ಸಂಬಂಧ ಕೇವಲ ರಾಜಕೀಯವಾದುದಲ್ಲ. ನನಗೆ ಕುಟುಂಬದಂತೆ. ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವಗಳೊಂದಿಗೆ ನಾನು ಇಲ್ಲಿಗೆ ಬರುತ್ತೇನೆ. ಯಾವುದೇ ಸ್ವಾರ್ಥ ಹಿತಾಸಕ್ತಿಗಳನ್ನು ಇಲ್ಲಿಗೆ ಹೊತ್ತುತರುವುದಿಲ್ಲ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ರಾಹುಲ್ ತಿಳಿಸಿದ್ದಾರೆ.
ಮೂರು ಹೊಸ ಕಾಯ್ದೆಗಳು ರೈತರಿಂದ ಎಲ್ಲವನ್ನೂ ಕಿತ್ತುಕೊಳ್ಳಲಿವೆ. ನಾವೂ ರೈತರೊಂದಿಗೆ ಇದ್ದೇವೆ. ಆದರೆ ಪಿಎಂ ಮೋದಿ ದೊಡ್ಡ ಉದ್ಯಮಿಗಳೊಂದಿಗೆ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss