Wednesday, July 6, 2022

Latest Posts

ತಮ್ಮ ಮನೆಯನ್ನೇ ಕಂಚಿ ಮಠಕ್ಕೆ ನೀಡಿದ ಎಸ್.ಪಿ. ಬಾಲಸುಬ್ರಹ್ಮಣ್ಯಂ

ನೆಲ್ಲೂರು: ಎಸ್ ಪಿ ಬಾಲಸುಬ್ರಹ್ಮಣ್ಯಂ ಯಾರಿಗೆ ಗೊತ್ತಿಲ್ಲ ಹೇಳಿ? ಇವರನ್ನು ಮತ್ತು ಇವರ ಹಾಡನ್ನು ಮರೆತರೆ ನಾವು ಕನ್ನಡಿಗರಾ ಎಂದು ಕೇಳುವಷ್ಟು ಮಟ್ಟಿಗಿನ ಜನಪ್ರಿಯತೆ ಗಳಿಸಿದ ಗಾಯಕ. ಎಸ್ ಪಿಬಿ ಅವರು ತಾವು ಹುಟ್ಟಿ ಬೆಳೆದ ಮನೆಯನ್ನು ಕಂಚಿ ಮಠಕ್ಕೆ ನೀಡಿದ್ದಾರೆ.

ಗಾಯಕ ಎಸ್ ಪಿಬಿ ಕಂಚಿ ಮಠವು ಆರಂಭಿಸುತ್ತಿರುವ ಪಾಠ ಶಾಲೆಗೆ ದಾನ ಮಾಡುವ ಮೂಲಕ ಮತ್ತೊಮ್ಮೆ ಜನರ ಮನಸ್ಸನ್ನು ಗೆದ್ದಿದ್ದಾರೆ.

ತಾವು ತಮ್ಮ ಮನೆಯನ್ನು ಮಠಕ್ಕೆ ಕೊಡುವುದಾಗಿ ಬಹಳ ಹಿಂದೆಯೇ ಘೋಷಿಸಿದ್ದರು. ಆದರೆ ಅದನ್ನು ಹಸ್ತಾಂತರಿಸುವುದಕ್ಕೆ ಸಮಯ ಬಂದಿರಲಿಲ್ಲ. ಮಂಗಳವಾರ ನೆಲ್ಲೂರಿಗೆ ಬಂದಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಖುದ್ದು ಉಪಸ್ಥಿತರಿದ್ದು, ತಿಪ್ಪರಾಜುವಾರಿ ಬೀದಿಯಲ್ಲಿರುವ ತಾವು ಹುಟ್ಟಿ ಬೆಳದ ಮನೆಯನ್ನು ಕಂಚಿ ಮಠದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗೆ ಹಸ್ತಾಂತರಿಸಿದ್ದಾರೆ.

ಈ ಬಳಿಕ ಮಾತನಾಡಿದ ಎಸ್ ಪಿಬಿ, ತಮ್ಮ ಮನೆಯನ್ನು ಮಠವು ವೇದ ಪಾಠಶಾಲೆಗೆ ಬಳಸಿಕೊಳ್ಳಲಿ ಎಂದು ಹೇಳಿದ್ದಾರೆ.

ಈ ಮನೆಯ ವೈಶಿಷ್ಟ್ಯ ಗೊತ್ತೇ?

ಬಹಳ ಜನರಿಗೆ ಈ ವಿಚಾರ ಗೊತ್ತಿರಲಿಕ್ಕಿಲ್ಲ – ಎಸ್ ಪಿಬಿ ಅವರ ತಂದೆ ಪಂಡಿತಾರಾಧ್ಯುಲ ಸಾಂಬಮೂರ್ತಿ ಭಾಗವತುಲು ಅವರು ಹರಿಕಥೆ ವಿದ್ವಾಂಸರಾಗಿ ನೆಲ್ಲೂರಿನಲ್ಲಿ ಬಹಳ ಹೆಸರುವಾಸಿಯಾಗಿದ್ದರು. ಅಲ್ಲದೇ ಇವರು ತ್ಯಾಗರಾಜರ ವಿನೀತ ಅನುಯಾಯಿಯಾಗಿದ್ದವರು. ಹಾಗಾಗಿ ಇವರನ್ನು ಜನರು ತ್ಯಾಗರಾಜ ಭಿಕ್ಷುವು ಎಂದೇ ಕರೆಯುತ್ತಿದ್ದರು. ಈಗ ಮಠಕ್ಕೆ ದಾನ ಮಾಡಲಾಗುತ್ತಿರುವ ಇದೇ ಮನೆಯಲ್ಲಿ ಶ್ರೀ ಸಾಂಬಮೂರ್ತಿ ಯವರು ತ್ಯಾಗರಾಜರ ಆರಾಧನೆಯ ಪದ್ಧತಿಯನ್ನು ದಶಕಗಳ ಹಿಂದೆಯೇ ಶುರು ಮಾಡಿದ್ದರು. ಇವರ ಮನೆಗೆ ದೇಶ ಕಂಡ ಕರ್ನಾಟಕ  ಸಂಗೀತದ ದಿಗ್ಗಜರೆಲ್ಲರೂ ಭೇಟಿ ಕೊಟ್ಟಿರುವುದು ವಿಶೇಷ. ಇದಕ್ಕೆ ಕಾರಣ, ಎಸ್ ಪಿಬಿ ಅವರ ಮನೆಗೆ ಸಾಕ್ಷಾತ್ ತ್ಯಾಗರಾಜರ ದೇವಸ್ಥಾನದಂತೆಯೇ ಇದ್ದಿದ್ದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss