ಬೀದರ: 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅಗ್ರಶ್ರೇಣಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಗಸ್ಟ್ 15ರಂದು ನಗರದ ಶ್ರೀ ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಪಶು ಸಂಗೋಪನೆ, ಹಜ್ ಮತ್ತು ವಕ್ಫ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ತಮ್ಮ ವೇತನವನ್ನು ಇದೆ ವೇಳೆ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು. ಈ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ ತೋರಿದಾಗ ಅವರಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿನಲ್ಲಿ ಉತ್ತಮ ಅಂಕಗಳನ್ನು ಪಡೆದ ತಾವುಗಳು ಇದೆ ರೀತಿ ಓದಬೇಕು. ಉತ್ತಮ ಹುದ್ದೆಗೆ ಏರಿ, ಸಮಾಜ ಸೇವೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ನಮ್ಮ ಜಿಲ್ಲೆಯಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂಬುದನ್ನು ತಾವುಗಳು ತೋರಿಸಿ ಕೊಟ್ಟಿದ್ದೀರಿ. ನಿಮಗೆ ಅಭಿನಂದನೆಗಳು ಎಂದು ಸಚಿವರು ಹೇಳಿದರು. ಭಾರತ ದೇಶದ ಬದಲಾವಣೆಗೆ ಮಾನ್ಯ ಪ್ರಧಾನಮಂತ್ರಿಗಳು, ಮಾನ್ಯ ಮುಖ್ಯಮಂತ್ರಿಗಳು ನಾಡಿನ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಶಿಕ್ಷಣ ಸಚಿವರ ಉತ್ತಮ ಕಾರ್ಯಯೋಜನೆಯಿಂದ ಶಾಲಾ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ ಎಂದು ತಿಳಿಸಿದ ಸಚಿವರು, ಸರ್ಕಾರಿ ಶಾಲೆಗಳು ಕೂಡ ಯಾವುದಕ್ಕೂ ಕಮ್ಮಿ ಇಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡೋಣ ಎಂದರು. ಸಚಿವರಿಗೆ ಅಭಿನಂದನೆ ತಿಳಿಸಿದ ಸಂಸದರು, ಶಾಸಕರು: ಸಮಾರಂಭದಲ್ಲಿ ಸಂಸದರಾದ ಭಗವಂತ ಖೂಬಾ ಅವರು ಮಾತನಾಡಿ, ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಶೈಕ್ಷಣಿಕ ಕ್ಷೇತ್ರದ ಉತ್ತೇಜನಕ್ಕೆ ಶ್ರಮಿಸುತ್ತಿರುವ ಸಚಿವರಾದ ಚವ್ಹಾಣ್ ಅವರಿಗೆ ವಂದನೆಗಳು ಎಂದು ತಿಳಿಸಿದರು. ಶಾಸಕರಾದ ರಹಿಂ ಖಾನ್ ಅವರು ಮಾತನಾಡಿ, ಶಿಕ್ಷಣಕ್ಕೆ ಬಹುದೊಡ್ಡ ತಾಕತ್ತಿದೆ. ಬಡವನೂ ದೊಡ್ಡ ಸ್ಥಾನದಲ್ಲಿ ಇರುವಂತೆ ಮಾಡುವುದು ಹಣವಲ್ಲ, ಶಿಕ್ಷಣದಿಂದ ಮಾತ್ರ ಅದು ಸಾಧ್ಯವಿದೆ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪುರೆ ಅವರು ಮಾತನಾಡಿ, ಓದಲು ಸಹಕಾರ ಕೊಡುವ ಮತ್ತು ಬೆನ್ನು ತಟ್ಟುವವರು ಇಂದಿನ ವಿದ್ಯಾರ್ಥಿಗಳಿಗೆ ಬೇಕಾಗಿದ್ದಾರೆ. ಅಂತಹ ಕೆಲಸವನ್ನು ಮಾನ್ಯ ಸಚಿವರಾದ ಚವ್ಹಾಣ್ ಅವರು ಮಾಡಿದ್ದಾರೆ. ಇಂತಹ ಕಾರ್ಯಕ್ರಮವನ್ನು ಜಿಲ್ಲಾಡಳಿತ ಮುಂದುವರೆಸಬೇಕು ಎಂದು ಸಲಹೆ ಮಾಡಿದರು. ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ನಮ್ಮಿಂದ ಹಣವನ್ನು ಯಾರಾದರು ಕಿತ್ತುಕೊಳ್ಳಬಹುದು. ಆದರೆ, ಓದಿ ತಿಳಿದುಕೊಂಡ ಜ್ಞಾನವನ್ನು ಯಾರಿಂದಲೂ ಕಿತ್ತು ಕೊಳ್ಳಲಾಗದು. ಪ್ರಯತ್ನ ಸತತವಾಗಿದ್ದರೆ ಮಾತ್ರ ಗೆಲುವು ಸಾಧ್ಯವಾಗಲಿದೆ. ಶಿಕ್ಷಣದಿಂದ ಮಾತ್ರ ನಾವು ದೊಡ್ಡ ಸ್ಥಾನಕ್ಕೆ ಹೋಗಲು ಸಾಧ್ಯವಿದೆ. ನಿಮ್ಮೊಳಗಿನ ಪ್ರತಿಭೆಯನ್ನು ನಂಬಿ ನೀವು ಪ್ರಯತ್ನಿಸಿದರೆ ಖಂಡಿತಾ ನಿಮಗೆ ಗೆಲುವು ಸಿಗಲಿದೆ ಎಂದು ತಿಳಿಸಿದರು. ಸನ್ಮಾನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿನಲ್ಲಿ ಇಡೀ ಜಿಲ್ಲೆಗೆ ಮತ್ತು ಆಯಾ ತಾಲೂಕುಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇದೆ ವೇಳೆ ಸಚಿವರು ಬಹುಮಾನ ನೀಡಿ ಸನ್ಮಾನಿಸಿದರು. ಈ ವೇಳೆ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಎಸ್ಪಿ ನಾಗೇಶ ಡಿ.ಎಲ್., ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್., ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ ಎಚ್.ಸಿ., ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಮೇಶ ಬೆಜಗಂ, ಶಾಹಿನ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಖದೀರ್ ಮತ್ತು ಸಾಧಕ ವಿದ್ಯಾರ್ಥಿಗಳ ಪಾಲಕರು ಈ ವೇಳೆ ಹಾಜರಿದ್ದರು.