ಧಾರವಾಡ: ಶಾಲೆಗಳಿಗೆ ರಜೆ ಇದ್ದುದರಿಂದ ಹುಬ್ಬಳ್ಳಿ ಲ್ಯಾಮಿಂಗ್ಟನ್ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ದಿವ್ಯಾ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತ 3ನೇ ತರಗತಿ ತನ್ನ ಸಹೋದರಿಗೆ ನಿತ್ಯವೂ ಪಾಠ ಬೋಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ.
ನಗರದ ರಾಜ್ಯಮಟ್ಟದ ತರಬೇತಿ ಸಂಸ್ಥೆಯಾದ ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್-ಕರ್ನಾಟಕ) ನಿರ್ದೇಶಕ ಬಿ.ಎಸ್.ರಘುವೀರ್ ತಮ್ಮ ಕಚೇರಿಗೆ ತೆರಳುವಾಗ ಮಾರ್ಗ ಮಧ್ಯದಲ್ಲಿ ಈ ದೃಶ್ಯವನ್ನು ಕಂಡು ವಿದ್ಯಾರ್ಥಿನಿಯ ಜತೆಗೆ ಮಾತಿಗಿಳಿದರು.
ದಿವ್ಯಾಳ ಬೋಧನಾ ವಿಧಾನ ಮೆಚ್ಚಿ, ಕೆಲಕಾಲ ವೀಕ್ಷಿಸಿ ಪೂರಕ ಸಲಹೆಗಳನ್ನು ನೀಡಿ ಅವಳನ್ನು ಪ್ರೋತ್ಸಾಹಿಸಿದ್ದಾರೆ. ಅವರ ಕುಟುಂಬ ನಿರ್ವಹಣೆ ತರಕಾರಿ ಮಾರಾಟದ ಜತೆಗೆ ತಾನೂ ಕಲಿಯಬೇಕು. ಸಹೋದರಿಯೂ ವಿದ್ಯಾವಂತಳಾಗಿ ಉನ್ನತ ದರ್ಜೆಗೆ ಹೋಗಬೇಕೆಂಬ ದಿವ್ಯಾಳ ಕಳಕಳಿ ಸಿಸ್ಲೆಪ್ ನಿರ್ದೇಶಕರು ಮೆಚ್ಚಿದ್ದಾರೆ.
ಮಾಧ್ಯಮಗಳಲ್ಲಿ ಆನ್ಲೈನ್ ಪಾಠಗಳು, ಅಲ್ಲಿನ ಲೈವ್ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ಈ ವಿದ್ಯಾರ್ಥಿನಿ ರಸ್ತೆ ಬದಿಯಲ್ಲಿ ನಿತ್ಯವೂ ತರಕಾರಿ ಮಾರಾಟ ಮಾಡುತ್ತಲೇ ತನ್ನ ತಂಗಿಗೆ ಪಾಠ ಹೇಳವುದು ನಿಜವಾದ ಆನ್ಲೈನ್ ಪಾಠದ ತರಗತಿ ಎಂದು ವಿಶ್ಲೇಷಿಸಿದ್ದಾರೆ.
ಧನಾತ್ಮಕ ನೆಲೆಯಲ್ಲಿ ಆಲೋಚಿಸಿ, ಸಾಧನೆಯ ಹಾದಿಯಲ್ಲಿ ಎದುರಾಗುವ ಕುಂದು-ಕೊರತೆಗಳನ್ನು ನೀಗಿ ಪ್ರಯತ್ನಗಳನ್ನು ನಿರಂತರ ಮುನ್ನಡೆಸಿದಾಗ ಯಶಸ್ಸು ಲಭಿಸುತ್ತದೆ. ವಿದ್ಯಾರ್ಥಿನಿ ದಿವ್ಯಾಳ ಪ್ರಯತ್ನಕ್ಕೆ ವ್ಯಾಪಕ ಪ್ರತಿಫಲ ಲಭಿಸಲಿ ಎಂದು ರಘುವೀರ್ ಶುಭ ಹಾರೈಸಿದ್ದಾರೆ.