Wednesday, July 6, 2022

Latest Posts

ತರಕಾರಿ ವಾಹನದಲ್ಲಿ ಕೇರಳಕ್ಕೆ ಬೀಟೆ ಮರ ಅಕ್ರಮ ಸಾಗಾಟ: ಪೊನ್ನಂಪೇಟೆ ಅರಣ್ಯ ಸಿಬ್ಬಂದಿಗಳಿಂದ ಮಾಲು ವಶಕ್ಕೆ

ಮಡಿಕೇರಿ: ತರಕಾರಿ ತುಂಬಿದ ವಾಹನದಲ್ಲಿ ಕೇರಳಕ್ಕೆ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದುದನ್ನು ಪೊನ್ನಂಪೇಟೆ ವಲಯದ ಅರಣ್ಯ ಸಿಬ್ಬಂದಿಗಳು ಪತ್ತೆಹಚ್ಚಿದ್ದು, ವಾಹ ಸಹಿತ ಲಕ್ಷಾಂತರ ಮೌಲ್ಯದ ಮರವನ್ನು ವಶಪಡಿಸಿಕೊಂಡಿದ್ದಾರೆ.
ಕುಟ್ಟ ಅರಣ್ಯ ತನಿಖಾ ಠಾಣೆಯ ಮುಂಭಾಗ ವಾಹನ ತಪಾಸಣೆ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ.
ಕೇರಳದ ತಲಚೇರಿಗೆ ಮಾಕುಟ್ಟ ಮಾರ್ಗ ಹತ್ತಿರದ ದಾರಿಯಾಗಿದ್ದರೂ, ಕಳೆದ 20 ದಿನದ ಹಿಂದೆ ಮಾಕುಟ್ಟ ಅರಣ್ಯ ಅಪರಾಧ ತನಿಖಾ ತಂಡ ಈಚರ್ ವಾಹನದಲ್ಲಿ ತರಕಾರಿಯೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ ಬೀಟೆ ಮರವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ತರಕಾರಿ ಚೀಲಗಳ ಅಡಿಯಲ್ಲಿ ಬೀಟೆ ಮರದ ತುಂಡುಗಳನ್ನು ತುಂಬಿ ಮಾನಂದವಾಡಿ ಮಾರ್ಗವಾಗಿ ಸಾಗಿಸಲು ಸಂಚು ನಡೆಸಲಾಗಿತ್ತು ಎನ್ನಲಾಗಿದೆ.
ಪಿಕ್ ಅಪ್ ಬೊಲೆರೋ ವಾಹನವು ಹುಣಸೂರಿನಿಂದ ತರಕಾರಿ ತುಂಬಿಕೊಂಡು ಮಂಗಳವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕುಟ್ಟ ಅರಣ್ಯ ಚೆಕ್‍ಪೋಸ್ಟ್ ತಲುಪಿತ್ತು. ಇದೇ ಸಂದರ್ಭ ರಾತ್ರಿ ಗಸ್ತಿನಲ್ಲಿದ್ದ ಉಪ ವಲಯಾರಣ್ಯಾಧಿಕಾರಿ ರವಿಕಿರಣ್ ಹಾಗೂ ತನಿಖಾ ಠಾಣೆ ಅರಣ್ಯ ವೀಕ್ಷಕ ವಿನೋದ್‍ಕುಮಾರ್ ವಾಹನ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹುಣಸೂರಿನಿಂದ ತರಕಾರಿ ತುಂಬಿಕೊಂಡು ಬಂದು, ಬಾಳೆಲೆ ಸಮೀಪ ದೇವನೂರು ಗ್ರಾಮದಲ್ಲಿ ಸ್ನೇಹಿತರಾದ ಬೇಬಿ ಹಾಗೂ ಅಜಾದ್ ಎಂಬವರ ಸಹಾಯದಿಂದ ಸುಮಾರು 21 ಬೀಟೆ ಸ್ಲ್ಯಾಬ್‍ಗಳನ್ನು ಪಿಕ್ ಅಪ್ ವಾಹನಕ್ಕೆ ತುಂಬಿಸಿಕೊಳ್ಳಲಾಗಿತ್ತು ಎಂದು ಬಂಧಿತ ವಾಹನ ಚಾಲಕ ಆರೋಪಿ ಅಸ್ಗರ್(40) ವಿಚಾರಣೆ ಸಂದರ್ಭ ಮಾಹಿತಿ ನೀಡಿದ್ದಾನೆ.
ಕಾರ್ಯಾಚರಣೆಯಲ್ಲಿ ಕುಟ್ಟ ಅರಣ್ಯ ಶಾಖೆ ಉಪ ವಲಯಾರಣ್ಯಾಧಿಕಾರಿ ಸಿ.ಡಿ.ಬೋಪಣ್ಣ, ಅರಣ್ಯ ರಕ್ಷಕರಾದ ರಾಜೇಶ್, ಸುಜಯ್ ಹಾಗೂ ಚೇತನ್ ಪಾಲ್ಗೊಂಡಿದ್ದರು. ಆರೋಪಿ ಅಸ್ಗರ್‍ನನ್ನು ಮಂಗಳವಾರ ಸಂಜೆ ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಗಿರಿಗೌಡ ಅವರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss