ಮಡಿಕೇರಿ: ತಲಕಾವೇರಿ ಕ್ಷೇತ್ರದಲ್ಲಿ ಪ್ರಸ್ತುತ ನಡೆಯುತ್ತಿರುವ ಪೂಜಾ ವಿಧಿವಿಧಾನಕ್ಕೆ ಮತ್ತು ಈಗಿನ ಅರ್ಚಕ ಸಮುದಾಯಕ್ಕೆ
ಸಂಪೂರ್ಣ ಬೆಂಬಲ ನೀಡಲು ಕೊಡಗು ಗೌಡ ಸಮಾಜಗಳ ಒಕ್ಕೂಟ ನಿರ್ಧರಿಸಿದೆ.
ಗೌಡ ಫೆಡರೇಷನ್ ಯುವ ಘಟಕದ ಸಮ್ಮುಖದಲ್ಲಿ ಮಡಿಕೇರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಒಕ್ಕೂಟದ ಅಧ್ಯಕ್ಷ ಸೋಮಣ್ಣ ಸೂರ್ತಲೆ ತಿಳಿಸಿದ್ದಾರೆ.
ಗಜಗಿರಿ ಬೆಟ್ಟ ಕುಸಿಯಲು ಬೆಟ್ಟಗಳಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಗಳು ಕಾರಣ ಎಂದು ವಿಶ್ಲೇಷಿಸಲಾಗುತ್ತಿದ್ದು, ಮೇಲ್ನೋಟಕ್ಕೆ ಇದು ಸತ್ಯವಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲು ಸರ್ಕಾರದ ಬಳಿ ನಿಯೋಗ ತೆರಳಲಾಗುವುದು. ಅರ್ಚಕ ಬಂಧುಗಳ ಮನಸ್ಸಿನಲ್ಲಿ ಸಾವಿನ ನೋವು ಹಸಿಯಾಗಿರುವಾಗಲೇ ತಲಕಾವೇರಿಯ ಇತಿಹಾಸವನ್ನು ಮರುಸೃಷ್ಟಿ ಮಾಡಲು ಹೊರಟಿರುವ ಕೆಲವರ ಕ್ರಮ ಖಂಡನೀಯ ಎಂದು ಸಭೆ ಅಭಿಪ್ರಾಯಪಟ್ಟಿತು.
ಕ್ಷೇತ್ರದಲ್ಲಿ ಪೂಜಾ ಕೈಂಕರ್ಯಗಳನ್ನು ವೈದಿಕ ಶಿಕ್ಷಣ ಪರಿಣಿತ ಪುರೋಹಿತ ಕುಟುಂಬಗಳೇ ನಡೆಸಬೇಕು ಎಂಬ ತಿಳುವಳಿಕೆ ಇದ್ದರೂ ಕೆಲವರು ಅಸಾಧ್ಯತೆಯತ್ತ ಹೆಜ್ಜೆ ಇಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಅಲ್ಲದೆ ಮಾಧ್ಯಮಗಳ ಮೂಲಕ ಬೆಂಬಲ ಸೂಚಿಸಿ ಹೇಳಿಕೆ ನೀಡುತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಶಾಂತಿಪ್ರಿಯ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸೋಮಣ್ಣ ಆರೋಪಿಸಿದ್ದಾರೆ.
ತಲಕಾವೇರಿ ಕ್ಷೇತ್ರದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿಗಳು ನಡೆಯುವುದನ್ನು ಮತ್ತು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡುವುದನ್ನು ನಾವು ಖಂಡಿಸುತ್ತೇವೆ. ಅಲ್ಲಿ ಬದುಕು ಕಟ್ಟಿಕೊಂಡಿರುವ ಬಡಜನತೆಯ ವ್ಯಾಪಾರ, ವಹಿವಾಟುಗಳಿಗೆ ಅಡ್ಡಿ ಉಂಟು ಮಾಡುವುದು ಹಾಗೂ ಗದರಿಸುವ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ಕಾವೇರಿ ಸರ್ವ ಜನತೆಯ ಆರಾಧ್ಯ ಮಾತೆಯಾಗಿದ್ದು, ಈ ಪವಿತ್ರ ಕ್ಷೇತ್ರವನ್ನು ಇತಿಹಾಸ ತಿರುಚಲು ಮತ್ತು ಹಕ್ಕು ಸ್ಥಾಪಿಸಲು ಆಯ್ಕೆ ಮಾಡಿಕೊಂಡಿರುವುದು ದುರಾದೃಷ್ಟಕರ ಎಂದು ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.
ಸೆ.21ರಂದು ಅಖಿಲ ಕೊಡವ ಸಮಾಜ ತಲಕಾವೇರಿ ಕ್ಷೇತ್ರದಲ್ಲಿ ಶತರುದ್ರಾಭಿಷೇಕ ನಡೆಸಲು ಹೊರಟಿರುವುದು ಸಂತೋಷದ ವಿಚಾರ.
ಈ ಪೂಜಾ ಕಾರ್ಯಕ್ಕೆ ನಮಗೆ ಆಹ್ವಾನ ಬಂದಿದೆ. ಆದರೆ, ಇದನ್ನು ಹಮ್ಮಿಕೊಳ್ಳುವ ಮೊದಲು ಕೊಡಗಿನ ಕಾವೇರಿ ಮಾತೆ ಸರ್ವಜನತೆಯ ಆರಾಧ್ಯ ದೇವತೆಯಾಗಿರುವುದರಿಂದ ಎಲ್ಲಾ ಜನಾಂಗಗಳ ಸಭೆ ನಡೆಸಿ ಎಲ್ಲರೊಂದಿಗೆ ಪೂಜಾ ಕಾರ್ಯ ಹಮ್ಮಿಕೊಂಡಿದ್ದರೆ ವಿಶೇಷವೆನಿಸುತ್ತಿತ್ತು ಎಂದು ತಿಳಿಸಿದ್ದಾರೆ.
ಆಗಸ್ಟ್ ಮೊದಲ ವಾರ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಮೃತಪಟ್ಟ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಐವರಿಗೆ ಮೌನಾಚರಣೆಯ ಮೂಲಕ ಸಂತಾಪ ಸಭೆ ಸೂಚಿಸಿತು.