Monday, July 4, 2022

Latest Posts

ತಲಕಾವೇರಿ ಪವಿತ್ರ ತೀರ್ಥೋದ್ಭವ, ದಸರಾ ಸಂದರ್ಭ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಮನವಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಕೋವಿಡ್ ಪರಿಸ್ಥಿತಿ ಹೆಚ್ಚಾಗುತ್ತಿದ್ದು, ಪರೀಕ್ಷೆಗೆ ಒಳಪಟ್ಟವರಲ್ಲಿ
ಶೇ.8ರಷ್ಟು ಮಂದಿಗೆ ಪಾಸಿಟಿವ್ ಬರುತ್ತಿದೆ. ಜೊತೆಗೆ ಮರಣ ಪ್ರಮಾಣವೂ ಶೇ.1.4ಕ್ಕೆ ಏರಿಕೆಯಾಗಿದ್ದು, ಇದನ್ನು ಶೇ.1ಕ್ಕಿಂತ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಆದ್ದರಿಂದ ದಸರಾ ಮತ್ತು ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಸಂದರ್ಭ ಸರ್ಕಾರದ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು,
ದಸರಾ ಸಮಿತಿ ಹಾಗೂ ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಭಿಪ್ರಾಯ ಪಡೆದು ಈ ತೀರ್ಮಾನ
ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕಿದೆ ಎಂದು ಕೋರಿದರು.
ದಸರಾ ಮತ್ತು ತಲಕಾವೇರಿ ಪವಿತ್ರ ತೀರ್ಥೋದ್ಭವವನ್ನು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕವಾಗಿ ಆಚರಿಸಬೇಕಿದೆ. ಗಣೇಶೋತ್ಸವ ಸಂದರ್ಭ ಅನುಸರಿಸಿದ ಮಾರ್ಗಸೂಚಿಗಳ ಈ ಸಂದರ್ಭದಲ್ಲಿ ಪಾಲಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ನೆಗೆಟಿವ್ ವರದಿ ಇದ್ದವರಿಗೆ ಅವಕಾಶ: ತಲಕಾವೇರಿ ಪವಿತ್ರ ತೀರ್ಥೋದ್ಭವ ಸಂದರ್ಭ ಕೋವಿಡ್ ಮಾರ್ಗಸೂಚಿ ಪಾಲನೆ ಸಂಬಂಧಿಸಿ
ದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ , ದೇವಸ್ಥಾನ ಸಮಿತಿ ಅಭಿಪ್ರಾಯದಂತೆ ಆರ್‍ಟಿಪಿಸಿಆರ್ ಮೂಲಕ
ಅ.14 ಮತ್ತು 15 ರಂದು ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಕೋವಿಡ್ ಪರೀಕ್ಷೆಯ ನೆಗೆಟಿವ್ ವೈದ್ಯಕೀಯ ಸರ್ಟಿಫಿಕೇಟ್
ಪ್ರಮಾಣ ಪತ್ರ ಇರುವವರಿಗೆ ಅವಕಾಶವಿದೆ ಎಂದು ತಿಳಿಸಿದರು.
ವಿಶೇಷ ಬಸ್‍ಗಳಿಲ್ಲ: ಮಡಿಕೇರಿ, ಭಾಗಮಂಡಲ ಮತ್ತು ತಲಕಾವೇರಿ ಮಾರ್ಗ ಪ್ರತಿ ನಿತ್ಯ ಓಡಾಡುವ ಬಸ್‍ಗಳು ಇರಲಿವೆ. ಉಳಿದಂತೆ ವಿಶೇಷ ಬಸ್‍ಗಳು ಇರುವುದಿಲ್ಲ. ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶವಿದೆ. ಆ ಸಂದರ್ಭದಲ್ಲಿಯೂ ನಿಯಮಗಳ
ಪಾಲಿಸಬೇಕು. ಭಾಗಮಂಡಲ-ತಲಕಾವೇರಿಯಲ್ಲಿ ರಾತ್ರಿ ತಂಗಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಕೋವಿಡ್ ಪರೀಕ್ಷೆ ಕಡ್ಡಾಯ: ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದಂತೆ
ಹಣ ಬಿಡುಗಡೆಯಾಗಲಿದೆ. ಕರಗ ಉತ್ಸವದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಈ ಸಂಬಂಧ ಅ.14 ಮತ್ತು 15 ರಂದು ಕೋವಿಡ್ ಪರೀಕ್ಷೆ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾತ್ರಿ 10 ಗಂಟೆಗೆ ಮುಕ್ತಾಯ: ಕರಗ ಉತ್ಸವದಲ್ಲಿ ಪಾಲ್ಗೊಳ್ಳುವವರನ್ನು ಎರಡು ಬಾರಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ.
ಮತ್ತು ಅವರಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಲಾಗುತ್ತದೆ. ದಸರಾ ಸಂದರ್ಭದ ವಿಜಯ ದಶಮಿಯಂದು ರಾತ್ರಿ 10 ಗಂಟೆಯೊಳಗೆ ಮಂಟಪ ಪೂಜಾ ಕಾರ್ಯಗಳು ಕೊನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕರಗ ಉತ್ಸವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸುವುದು, ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಮಡಿಕೇರಿ ನಗರದಲ್ಲಿ ಬೀದಿ ದೀಪ ಅಳವಡಿಸುವ ಸಂಬಂಧ ಪೌರಾಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.
ಪ್ರವಾಸಿ ಕೇಂದ್ರಗಳು ಬಂದ್: ಅಕ್ಟೋಬರ್ 17 ಮತ್ತು 26 ರಂದು ಎರಡು ದಿನದ ಮಟ್ಟಿಗೆ ರಾಜಾಸೀಟು ಮತ್ತು ಅಬ್ಬಿಪಾಲ್ಸ್ ಪ್ರವಾಸಿ ಕೇಂದ್ರಗಳು ಮುಚ್ಚಿರುತ್ತವೆ. ಆದ್ದರಿಂದ ಪ್ರವಾಸಿಗರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಬೀದಿಬದಿ ವ್ಯಾಪಾರ ಇಲ್ಲ: ದಸರಾ ಸಂದರ್ಭದಲ್ಲಿ ಬೀದಿ ಬದಿ ತಾತ್ಕಾಲಿಕ ಶೆಡ್ಡು ನಿರ್ಮಿಸಿ ಅಂಗಡಿಗಳ ತೆರೆಯಲು ಅವಕಾಶವಿಲ್ಲ. ಸಾಂಸ್ಕತಿಕ ಕಾರ್ಯಕ್ರಮಗಳು ಇರುವುದಿಲ್ಲ. ಹೋಂ ಸ್ಟೇ, ರೆಸಾರ್ಟ್‍ಗಳು, ಲಾಡ್ಜ್‍ಗಳು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಈ ಸಂಬಂಧ ದಿಢೀರ್ ಭೇಟಿ ನೀಡಲು ತಂಡ ರಚಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ  ಮಾತನಾಡಿ, ತಲಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಪೊಲೀಸ್ ಬಂದೋ ಬಸ್ತ್ ಮಾಡಿಕೊಳ್ಳಲಾಗಿದ್ದು, ಕೋವಿಡ್ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ನುಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss