Monday, August 8, 2022

Latest Posts

ತಲಕಾವೇರಿ ಭೂ ಕುಸಿತ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ, ಪರಿಸ್ಥಿತಿ ಅವಲೋಕನೆ

ಮಡಿಕೇರಿ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಉಂಟಾಗಿರುವ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ತ್ರಿವೇಣಿ ಸಂಗಮ ಪ್ರದೇಶವು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ತಲಕಾವೇರಿಯ ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ಸುರಿಯುವ ಮಳೆಯ ನಡುವೆಯೇ ಬೋಟ್ ಮುಖಾಂತರ ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕರಾದ ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ಸಂಸದ ಪ್ರತಾಪ್ ಸಿಂಹ, ಜಿ.ಪಂ ಅಧ್ಯಕ್ಷ ಬಿ.ಎ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮತ್ತಿತರರು ಭಾಗಮಂಡಲದ ಮತ್ತೊಂದು ತುದಿ ತಲುಪಿ ಅಲ್ಲಿಂದ ರಸ್ತೆ ಮೂಲಕ ತಲಕಾವೇರಿಗೆ ಭೇಟಿ ನೀಡಿದರು.
ತಲಕಾವೇರಿ ಭೂ ಕುಸಿತ ಪ್ರದೇಶ ವೀಕ್ಷಣೆ ನಂತರ ಭಾಗಮಂಡಲದಲ್ಲಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಜತೆ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರ ಮನೆ ಕುಸಿತವಾಗಿರುವ ಚಿತ್ರಣವನ್ನು ಕಂಡು ನಿಜಕ್ಕೂ ಆಘಾತವಾಯಿತು. ತಲಕಾವೇರಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಎನ್‍ಡಿಆರ್‍ಎಫ್ ತಂಡದಿಂದ ರಕ್ಷಣಾ ಕಾರ್ಯ ಮಾಡಲಾಗುತ್ತಿಲ್ಲ ಎಂದು ವಿಷಾದಿಸಿದರು.
ಭಾಗಮಂಡಲ-ತಲಕಾವೇರಿ ರಸ್ತೆ ಶನಿವಾರದೊಳಗೆ ಸಂಚಾರಕ್ಕೆ ಮುಕ್ತವಾಗಲಿದ್ದು, ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯಾಚರಣೆ ಆರಂಭಿಸಲಿದೆ ಎಂದು ಹೇಳಿದ ಅವರು, ವೀರಾಜಪೇಟೆಯ ಅಯ್ಯಪ್ಪ ಬೆಟ್ಟ ಸೇರಿದಂತೆ ಇತರ ಅಪಾಯಕಾರಿ ಸ್ಥಳದಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹೇಳಿದರು.
ಭಯ ಬೇಡ-ಎಚ್ಚರದಿಂದಿರಿ: ಪ್ರಧಾನ ಅರ್ಚಕರ ಜೊತೆಗೆ ಮತ್ತೂ 4 ಜನ ಇದ್ದ ಬಗ್ಗೆ ಮಾಹಿತಿ ಇದ್ದು, ಅರ್ಚಕರ ಮನೆಯಲ್ಲಿದ್ದ 40ಕ್ಕೂ ಹೆಚ್ಚಿನ ಹಸುಗಳು ಕೊಚ್ಚಿ ಹೋಗಿರುವುದಾಗಿ ಸ್ಥಳೀಯರು ತಿಳಿಸಿರುವುದಾಗಿ ಮಾಹಿತಿ ನೀಡಿದ ಸಚಿವರು, ಎಸ್‍ಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್ ತಂಡ ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಜಿಲ್ಲೆಯ ಜನರು ಹೆದರುವ ಅಗತ್ಯವಿಲ್ಲ ಎಚ್ಚರಿಕೆಯಿಂದಿರಿ ಎಂದು ಸಚಿವರು ಸಲಹೆ ಮಾಡಿದರು.
ಪ್ರಧಾನ ಅರ್ಚಕರು ಅಧಿಕಾರಿಗಳ ಮಾತನ್ನು ಕೇಳಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ ಎಂದೂ ಸಚಿವರು ಇದೇ ಸಂದರ್ಭ ನುಡಿದರಲ್ಲದೆ, ಕಳೆದ ಬಾರಿ ತೋರಾದಲ್ಲಿ ಆದ ರೀತಿಯ ಅನಾಹುತ ಇಲ್ಲೂ ಆಗಿದೆ ಎಂದು ವಿಷಾದಿಸಿದರು.
ಪರಿಹಾರ ಕೇಂದ್ರ ಸುರಕ್ಷಿತ: ಈಗಾಗಲೇ ಪರಿಹಾರ ಕೇಂದ್ರಗಳಲ್ಲಿ ಜನರನ್ನು ಸುರಕ್ಷಿತವಾಗಿ ಇರಿಸಲಾಗಿದೆ. ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಮುಖಾಂತರ ಕೊರೋನಾ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದವರನ್ನು ಪರಿಹಾರ ಕೇಂದ್ರದಲ್ಲಿ ಇರಿಸಲಾಗುತ್ತದೆ. ಪಾಸಿಟಿವ್ ಬಂದರೆ ನೇರವಾಗಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಣ ಮುಖ್ಯ ಅಲ್ಲ, ಜನರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಸೋಮಣ್ಣ ನುಡಿದರು.
ವಿಶೇಷ ಪ್ಯಾಕೇಜ್ ಅಗತ್ಯ: ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆ ಸುರಿದು ಸಂಕಷ್ಟಗಳು ಎದುರಾಗುತ್ತಿವೆ. ಆದ್ದರಿಂದ ಕೊಡಗು ಜಿಲ್ಲೆಗೆ ಪ್ರತಿ ವರ್ಷ ಬಜೆಟ್‍ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss