Saturday, July 2, 2022

Latest Posts

ತಲಪ್ಪಾಡಿ ಗಡಿ ವಿಚಾರದಲ್ಲಿ ಕೇರಳದ ಜನಪ್ರತಿನಿಧಿಗಳ ಗಾಢ ಮೌನ ಸಂಶಯಾಸ್ಪದ : ಮಂಜೇಶ್ವರ ಮಂಡಲ ಬಿಜೆಪಿ

ಕಾಸರಗೋಡು: ಕೊರೋನಾ ಲಾಕ್ ಡೌನ್ ನಿಯಮದ ಭಾಗವಾಗಿ ತಲಪ್ಪಾಡಿ ಗಡಿ ಹಾಗೂ ಕೇರಳ – ಕರ್ನಾಟಕದ ಇತರ ಗಡಿಗಳ ನಿರ್ಬಂಧವನ್ನು ಪ್ರಶ್ನಿಸಿ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತೋರಿದ ಆತುರದ ನಿರ್ಧಾರಗಳು ಹಾಗೂ ನಂತರ ಸುಪ್ರೀಂಕೋರ್ಟ್ ಕದ ತಟ್ಟಿದ ಆತುರದ ವ್ಯವಸ್ಥೆಗಳು ಉಭಯ ರಾಜ್ಯಗಳ ಗಡಿ ತೆರೆಯುವಲ್ಲಿ ಅಡ್ಡಿಯಾಗಿವೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
ಕರ್ನಾಟಕ ಸರಕಾರದೊಂದಿಗೆ ಅಧಿಕೃತ ಮಾತುಕತೆಗೆ ತಯಾರಾಗದ ಕೇರಳದ ಪಿಣರಾಯಿ ವಿಜಯನ್ ಸರಕಾರ, ಕಾಸರಗೋಡು ಜಿಲ್ಲಾಡಳಿತ ಮತ್ತು ಜಿಲ್ಲೆಯ ಸಂಸದರ ಹಾಗೂ ಶಾಸಕರ ಗಾಢ ಮೌನ ಸಂಶಯಾಸ್ಪದವಾಗಿದೆ ಎಂದು ಬಿಜೆಪಿ ಮಂಡಲ ಸಮಿತಿ ತಿಳಿಸಿದೆ.
ಗಡಿನಾಡು ಕಾಸರಗೋಡು ಜಿಲ್ಲೆಯ ಶೇಕಡಾ 80ರಷ್ಟು ಕನ್ನಡಿಗರು ವಿದ್ಯಾಭ್ಯಾಸ, ಉದ್ಯೋಗ, ಆಸ್ಪತ್ರೆ, ಆರೋಗ್ಯ , ವ್ಯಾಪಾರ ವಹಿವಾಟಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿರುವಾಗ ಕರ್ನಾಟಕದದೊಂದಿಗೆ ಯುದ್ಧಕ್ಕೆ ನಿಂತಂತೆ ವರ್ತಿಸುವ ಸಂಸದರು, ಶಾಸಕರು ಸಮಸ್ಯೆ ಪರಿಹಾರಕ್ಕೆ ವೇದಿಕೆ ಸಿದ್ಧಪಡಿಸದೆ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಮಂಡಲ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ನಿರ್ವಸುತ್ತಿರುವ ಕಾಸರಗೋಡು ಜಿಲ್ಲೆಯ ನಿವಾಸಿಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈಗಾಗಲೇ ಕೆಲವರಿಗೆ ಈ ವಿಚಾರವಾಗಿ ನೋಟೀಸ್ ಜಾರಿಯಾಗಿದೆ.
ಕಾಸರಗೋಡು ಜಿಲ್ಲೆಯ ಎಲ್ಲ ಬಿಜೆಪಿ ನೇತಾರರು ಗಡಿ ತೆರವಿಗೆ ಶತ ಪ್ರಯತ್ನದಲ್ಲಿರುವಾಗ ಸಂಸದರ ಮತ್ತು ಶಾಸಕರ ಮೌನ ಯಾಕೆ ಎಂದು ಬಿಜೆಪಿ ಪ್ರಶ್ನಿಸಿದೆ.
ಉಭಯ ಸರಕಾರಗಳ ಕಾರ್ಯದರ್ಶಿಗಳ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ನೇತೃತ್ವ ನೀಡಿ ಈ ವಿಚಾರದಲ್ಲಿ ಶೀಘ್ರವಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ತಲಪ್ಪಾಡಿ ಸೇರಿದಂತೆ ಕೇರಳ – ಕರ್ನಾಟಕ ಗಡಿ ನಿರ್ಬಂಧ ವಿಷಯದಲ್ಲಿ ಮಂಜೇಶ್ವರ ತಾಲೂಕಿನ ಜನರು ಸ್ಥಳೀಯ ಶಾಸಕರನ್ನು ಮತ್ತು ಸಂಸದರನ್ನು ಪ್ರಶ್ನಿಸಬೇಕಿದೆ. ಇದಕ್ಕಾಗಿ ಆಂದೋಲನ ನಡೆಯಬೇಕು. ಇಲ್ಲವಾದಲ್ಲಿ ಇಲ್ಲಿನ ಜನಪ್ರತಿನಿಧಿಗಳು ಮೌನ ಮುರಿಯಲಾರರು ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss