ಕಾಸರಗೋಡು: ತಲಪ್ಪಾಡಿಯಿಂದ ತಿರುವನಂತಪುರ ತನಕದ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥವಾಗಿ ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯ ನಿರ್ಮಾಣ ಕಾಮಗಾರಿಯ ಉದ್ಘಾಟನೆಯು ಮಂಗಳವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.
ಕೇಂದ್ರ ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಹೈವೇ ನಿರ್ಮಾಣ ಯೋಜನೆಯನ್ನು ಉದ್ಘಾಟಿಸಿದರು. ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವರಾದ ವಿ.ಕೆ.ಸಿಂಗ್, ವಿ.ಮುರಳೀಧರನ್, ಕೇರಳದ ಸಚಿವ ಜಿ.ಸುಧಾಕರನ್ ಮುಂತಾದವರು ಭಾಗವಹಿಸಿದ್ದರು.
ಈ ಯೋಜನೆಗೆ ಒಟ್ಟು 11,547.4 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದ್ದು , ಕಾಸರಗೋಡು ಜಿಲ್ಲೆಯ ತಲಪ್ಪಾಡಿ ಗಡಿಯಿಂದ ಆರಂಭಗೊಂಡು ತಿರುವನಂತಪುರ ಜಿಲ್ಲೆಯ ಕಳಕೂಟಂ ವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಜೊತೆಗೆ ಹಲವೆಡೆ ಹೊಸ ಸೇತುವೆಗಳನ್ನು ನಿರ್ಮಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.
ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ತಲಪ್ಪಾಡಿಯಿಂದ ತಿರುವನಂತಪುರದ ವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಸಮಗ್ರ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೈಗೊಂಡಿದೆ.