ಕಾಸರಗೋಡು: ಕೊರೋನಾ ಸೋಂಕಿನ ಕಾರಣ ವಿವಿಧೆಡೆ ಬಾಕಿಯಾಗಿದ್ದ ಕೇರಳೀಯರು ಸ್ವಂತ ಊರಿಗೆ ಮರಳತೊಡಗಿದ್ದಾರೆ. ಗಡಿ ಪ್ರದೇಶ ತಲಪ್ಪಾಡಿಯ ಮೂಲಕ ವಿದ್ಯಾರ್ಥಿಗಳು, ಮಹಿಳೆಯರು, ಪುರುಷರು, ವಯೋ ವೃದ್ಧರ ಸಹಿತ ಅನೇಕ ಮಂದಿ ಸೋಮವಾರ ರಾಜ್ಯ ಪ್ರವೇಶ ಮಾಡಿದ್ದಾರೆ.
ಸೋಮವಾರ ಆಗಮಿಸಿದವರಲ್ಲಿ ಕರ್ನಾಟಕದ ವಿವಿಧ ಸಂಸ್ಥೆಗಳಲ್ಲಿ ಕಲಿಕೆ ನಡೆಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿತ್ತು. ಮುಂದಿನ ದಿನಗಳಲ್ಲಿ ಗೋವಾ, ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳಿಂದ ನೂರಾರು ಮಂದಿ ಆಗಮಿಸುವ ನಿರೀಕ್ಷೆಗಳಿವೆ. ನೋರ್ಕಾದ ವೆಬ್ ಸೈಟ್ ಮೂಲಕ ನೋಂದಣಿ ನಡೆಸುವ ಮೂಲಕ ರಾಜ್ಯಕ್ಕೆ ಆಗಮಿಸಲು ದಿನಾಂಕ ನಿಗದಿಪಡಿಸಲಾಗುವುದು. ಇದಲ್ಲದೆ ತುರ್ತು ಹಿನ್ನೆಲೆಯಲ್ಲಿ ಆಗಮಿಸುವವರಿಗೆ ಬೇರೆಯೇ ವ್ಯವಸ್ಥೆಗಳು ಗಡಿಪ್ರದೇಶದಲ್ಲಿವೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಟೋಕನ್ ಮೂಲಕ ವ್ಯವಸ್ಥೆಗಗಳನ್ನು ಮಾಡಲಾಗಿದೆ. ತಲಪ್ಪಾಡಿಯಲ್ಲಿ ಈಗ 60 ಹೆಲ್ಪ್ ಡೆಸ್ಕ್ ಗಳನ್ನು ಸಜ್ಜುಗೊಳಿಸಲಾಗಿದೆ. ಶೀಘ್ರದಲ್ಲೇ 100 ಹೆಲ್ಪ್ ಡೆಸ್ಕ್ ಸಿದ್ಧಪಡಿಸಲಾಗುವುದು ಎಂದು ಮಂಜೇಶ್ವರ ತಹಸೀಲ್ದಾರ್ ಪಿ.ಜೆ.ಆಂಟೋ ಹೇಳಿದ್ದಾರೆ. ಸುರಕ್ಷೆ ಸಹಿತ ವಿವಿಧ ವ್ಯವಸ್ಥೆಗಳಿಗಾಗಿ 24 ತಾಸೂ ಚಟುವಟಿಕೆ ನಡೆಸುವ ಅಗ್ನಿಶಾಮಕ ವಾಹನವೂ ಇಲ್ಲಿದೆ.