ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿವಾದಿತ ವೆಬ್ ಸಿರೀಸ್ ‘ತಾಂಡವ್’ ಅನ್ನು ರದ್ದು ಮಾಡಬೇಕೆಂದು ಬಿಜೆಪಿ ಸಂಸದ ಮನೋಜ್ ಕೊಟಕ್ ಮಾಹಿತಿ ಮತ್ತು ಪ್ರಸಾರ ಖಾತೆಯ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಹಿಂದು ದೇವತೆಗಳಿಗೆ ಅವಮಾನ ಎಸಗಲಾಗಿದೆ ಎಂದು ಉಲ್ಲೇಖಿಸಲಾಗಿದ್ದು, ತಾಂಡವ್ ವೆಬ್ ಸಿರೀಸ್ ಪ್ರಸಾರ ಮಾಡುತ್ತಿರುವ ಓಟಿಟಿ ಪ್ಲಾಟ್ಫಾರ್ಮ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ್ದ ಮನೋಜ್ ಕೋಟಕ್, ಭಾರತದ ಸಮಗ್ರತೆಗೆ ಈ ವೆಬ್ ಸಿರೀಸ್ ಧಕ್ಕೆ ತರುತ್ತಿದ್ದು, ಓಟಿಟಿ ಪ್ಲಾಟ್ಫಾರ್ಮ್ನ ಸೆನ್ಸಾರ್ಶಿಪ್ ಮೇಲೆ ಕೆಲವೊಂದು ನಿರ್ಬಂಧಗಳನ್ನು ಜಾರಿಗೊಳಿಸಬೇಕೆಂದೂ ಆಗ್ರಹಿಸಿದ್ದಾರೆ.
ಈಗ ಪ್ರಸಾರವಾಗುತ್ತಿರುವ ಬಹುತೇಕ ಸಿನಿಮಾಗಳಲ್ಲಿ ಹಾಗೂ ವೆಬ್ ಸಿರೀಸ್ಗಳಲ್ಲಿ ಹಿಂದು ದೇವತೆಗಳನ್ನು ಅವಮಾನಿಸಲಾಗುತ್ತಿದೆ. ಈಗ ತಾಂಡವ್ ವೆಬ್ ಸಿರೀಸ್ನಲ್ಲೂ ದೇವತೆಗಳನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದು, ಆಕ್ಷೇಪಾರ್ಹ ದೃಶ್ಯಗಳನ್ನು ಡಿಲೀಟ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇದರ ಬೆನ್ನಲ್ಲೇ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಂ ಮುಂಬೈನ ಘಟ್ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವೆಬ್ ಸಿರೀಸ್ನ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ತಾಂಡವ್ ಹಿಂದಿ ಭಾಷೆಯ ವೆಬ್ ಸಿರೀಸ್ ಆಗಿದ್ದು, ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗುತ್ತಿದೆ. ಈ ವೆಬ್ ಸಿರೀಸ್ನಲ್ಲಿ ಬಾಲಿವುಡ್ ತಾರೆಯರಾದ ಸೈಫ್ ಅಲಿಖಾನ್ ಮತ್ತು ಡಿಂಪಲ್ ಕಪಾಡಿಯಾ ಮತ್ತಿತರರು ಕಾಣಿಸಿಕೊಂಡಿದ್ದಾರೆ.
My letter to Hon.minister @PrakashJavdekar ji regarding regulation of the OTT platforms pic.twitter.com/twwI6OP4iM
— Manoj Kotak (@manoj_kotak) January 17, 2021