Saturday, June 25, 2022

Latest Posts

ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಶೀಘ್ರ ಹೆಚ್ಚಿನ ತರಗತಿಗಳು ಆರಂಭ: ಸಚಿವ ಸುರೇಶ್‌ಕುಮಾರ್

ಹೊಸ ದಿಗಂತ ವರದಿ, ಚಿತ್ರದುರ್ಗ:

ಕೋವಿಡ್-19ರ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದರೆ ಮುಂಬರುವ ದಿನಗಳಲ್ಲಿ ಹೆಚ್ಚಿನ ತರಗತಿಗಳನ್ನು ಪ್ರಾರಂಭಿಸಲು ಅನುಕೂಲವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸುರೇಶ್‌ಕುಮಾರ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ದಂಡಿನಕುರುಬರಹಟ್ಟಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನಲೆಯಲ್ಲಿ ಸ್ಥಗಿತವಾಗಿದ್ದ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಶೈಕ್ಷಣಿಕ ಚಟುವಟಿಕೆ ಮಾತ್ರ ಕುಂಠಿತವಾಗಿದ್ದು, ಈ ನಿಟ್ಟಿನಲ್ಲಿ ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿಯನ್ವಯ ಹೆಚ್ಚಿನ ತರಗತಿಗಳ ಆರಂಭಕ್ಕೆ ಕ್ರಮಕೈಗೊಳ್ಳಲಾತ್ತದೆ. ಮಕ್ಕಳ ಆರೋಗ್ಯದ ಜೊತೆಗೆ ಶೈಕ್ಷಣಿಕ ಭವಿಷ್ಯವೂ ಅಷ್ಟೇ ಮುಖ್ಯವಾಗಿದೆ. ಈ ಎರಡನ್ನೂ ಜೊತೆಜೊತೆಯಲ್ಲಿ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಬಹಳಷ್ಟು ಮಂದಿ ಪೋಷಕರು ಶಾಲೆಗೆ ಮಕ್ಕಳನ್ನು ಸೇರಿಸಿಲ್ಲ. ಆದರೆ ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಶಾಲಾ
ದಾಖಲಾತಿ ಮಾಡಿಸಬೇಕಾಗಿದೆ. ಈ ವರ್ಷ ಶೂನ್ಯವರ್ಷ ಎಂದು ಘೋಷಿಸುವುದಿಲ್ಲ. ಆಗಸ್ಟ್ ತಿಂಗಳಲ್ಲಿ ವಿದ್ಯಾಗಮ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯುತ್ತಿತ್ತು. ಈಗ 1 ರಿಂದ 4ನೇ ತರಗತಿಗೆ ರೇಡಿಯೋ ಮೂಲಕ ಪ್ರತಿ ದಿನ ಬೆಳಿಗ್ಗೆ 10 ರಿಂದ 10.30ರವರೆಗೆ ನಲಿಯುತ್ತಾ ಕಲಿಯುವ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ರೇಡಿಯೋ ಕೇಳಿಸಬೇಕು ಎಂದು ತಿಳಿಸಿದರು.
ಈ ವರ್ಷ ಸವಾಲಿನ ವರ್ಷವಾಗಿದ್ದು, ಒಂದು ಕಡೆ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಜರ್ಜರಿತ ಹಾಗೂ ಜೊತೆಗಿದ್ದವರು ಕೋವಿಡ್‌ಗೆ ಬಲಿಯಾಗಿದ್ದಾರೆ. ಉದ್ಯೋಗದ ತೊಂದರೆಯಿಂದ ಶಾಲೆಗಳ ಶುಲ್ಕ ಭರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ಸಂಬಂಳ ಕಡಿತಗೊಳಿಸಲಾಗಿದ್ದರೆ, ಇನ್ನೂ ಕೆಲವು ಶಿಕ್ಷಕರನ್ನು ಕೆಲಸದಿಂದ ತೆಗೆಯಲಾಗಿದೆ. ಆದರೆ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಒಂದು ತಿಂಗಳ ವೇತನ ನಿಲ್ಲಿಸಿಲ್ಲ. ನಮ್ಮ ಶಿಕ್ಷಕರು ನಮ್ಮ ಶಾಲೆ, ನಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಈ ಶಾಲೆಯಲ್ಲಿ ಓದಿದವರು ಸಮಾಜಕ್ಕೆ ಅಂಟಿಕೊಂಡು ಸಮಾಜದಲ್ಲಿನ ಸಮಸ್ಯೆಗಳಿಗೆ ಇವರಿಂದ ಪರಿಹಾರ ಸಾಧ್ಯವಾಗಲಿದೆ. ಹಾಗಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಅಕ್ಕರಿಕೆಯಿಂದ ಕಲಿಕೆಯಲ್ಲಿ ತೊಡಗಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ರಾಜ್ಯಸಭಾ ಮಾಜಿ ಸದಸ್ಯ ಹನುಮಂತಪ್ಪ, ಜಿ.ಪಂ.
ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್, ತಾ.ಪಂ. ಅಧ್ಯಕ್ಷ ಲಿಂಗರಾಜು, ಡಿಡಿಪಿಐ ರವಿಶಂಕರ್ ರೆಡ್ಡಿ, ಕೊಠಡಿ ನಿರ್ಮಾಣ ದಾನಿ ಸಣ್ಣಕ್ಕಿ ಪ್ರಹ್ಲಾದ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss