ಹೊಸ ದಿಗಂತ ವರದಿ, ಶಿವಮೊಗ್ಗ:
ನಗರದ ಗಾಂಧಿ ಪಾರ್ಕ್ ಗೆ ತಾಯಿ ಜೊತೆ ಬಂದಿದ್ದ ಇಬ್ಬರು ಮಕ್ಕಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಭದ್ರಾವತಿಯ ಗೀತಾ ಸೋಮವಾರ ಮಕ್ಕಳಾದ ಅಶ್ವಿನ್ (5), ಆಕಾಂಕ್ಷ (8) ಜೊತೆ ನಗರದ ಗಾಂಧಿ ಪಾರ್ಕ್ ಗೆ ಬಂದಿದ್ದರು. ಅಲ್ಲಿಯೇ ಜ್ಯೂಸ್ ಖರೀದಿಸಿ ಮಧ್ಯಾಹ್ನ ಮತ್ತು ಸಂಜೆ ಸೇವಿಸಿದ್ದರು.
ಸಂಜೆ ಮನೆಗೆ ತೆರಳಲು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಮಕ್ಕಳ ಬಾಯಲ್ಲಿ ನೊರೆ ಬಂದಿದೆ. ತಕ್ಷಣ ಅಲ್ಲಿದ್ದ ಸಾರ್ವಜನಿಕರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು.
ನಂತರ ಹೆಚ್ಚಿನ ಚಿಕಿತ್ಸೆಗೆ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಂಗಳವಾರ ಮಕ್ಕಳು ಮೃತಪಟ್ಟಿವೆ.
ಮಕ್ಕಳ ಸಾವಿಗೆ ತಾಯಿಯೇ ಕಾರಣ ಇರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.