ಬಳ್ಳಾರಿ: ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ಇಲ್ಲಿನ ತುಂಗಭದ್ರ ರೈತ ಸಂಘದ ಪದಾಧಿಕಾರಿಗಳು ಹಾಗೂ ನೆರೆಯ ಆಂದ್ರಪ್ರದೇಶದ ರೈತರು ಜಲಾಶಯಕ್ಕೆ ವಿಶೇಷ ಪೂಜೆ ಸಲ್ಲಿಸಿ ಗುರುವಾರ ಬಾಗಿನ ಅರ್ಪಿಸಿದರು. ತುಂಗಭದ್ರಾ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಅವರು ಮಾತನಾಡಿ, ಪ್ರಸಕ್ತ ವರ್ಷ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ಸಂತಸ ಮನೆ ಮಾಡಿದೆ. ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ನಾನಾ ಕಡೆಯ ರೈತರಿಗೆ ಹಾಗೂ ನೆರೆಯ ಆಂದ್ರಪ್ರದೇಶ ಹಾಗೂ ತೆಲಂಗಾಣ ಪ್ರದೇಶದ ರೈತರಿಗೂ ಸಂತಸ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರೈತರೊಂದಿಗೆ ತಾಯಿ ತುಂಗಭದ್ರೆಗೆ ವಿಶೇಷ ಗಂಗಾ ಪೂಜೆ ಸಲ್ಲಿಸಿ, ಬಾಗಿನ ಸಲ್ಲಿಸಿದ್ದೆವೆ ಎಂದು ತಿಳಿಸಿದರು.
ಚುನಾಯಿತ ಜನಪ್ರತಿನಿಧಿಗಳು ಮಾಡುವ ಎಡವಟ್ಟು, ನಿರ್ಲಕ್ಷ್ಯ ದಿಂದ ಜಲಾಶಯದಲ್ಲಿ ಸಮಗ್ರವಾದ ಹೂಳನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಸಭೆ ಸಮಾರಂಭಗಳಲ್ಲಿ ಆಸ್ವಾಸನೆ ನೀಡಿ ಕೈತೊಳೆದುಕೊಳ್ಳುತ್ತಾರೆ ಹೊರತು ಇಲ್ಲಿವರೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಲಾಶಯದಲ್ಲಿ ಸಂಗ್ರಹವಾದ ಹೂಳನ್ನು ತೆರವು ಗೊಳಿಸುವುದು ಅಸಾಧ್ಯ ಎಂದು ಸರ್ಕಾರಕ್ಕೆ ಅಧಿಕಾರಿಗಳು ಹಾಗೂ ಎಂಜಿನಿಯರ್ ಗಳು ಹೇಳುವ ಸುಳ್ಳು ಮಾಹಿತಿಯನ್ನೇ ನಂಬುತ್ತಿದ್ದು, ಇಲ್ಲಿವರೆಗೆ ಈ ಕುರಿತು ಆಳುವ ಸರ್ಕಾರಗಳು ಗಮನಹರಿಸುತ್ತಿಲ್ಲ. ಜಲಾಶಯದ ಹೂಳನ್ನು ತೆರವುಗೊಳಿಸುವುದು ಅಸಾಧ್ಯ ಎಂದಾಗ ನಮ್ಮ ರೈತರ ನೇತೃತ್ವದಲ್ಲೇ ಹೂಳನ್ನು ಸಾಂಕೇತಿಕವಾಗಿ ತೆರವುಗೊಳಿಸಿ, ಸರ್ಕಾರದ ಗಮನಸೆಳೆದಿದ್ದೇವೆ. ಆದರೂ ಇಲ್ಲಿವರೆಗೆ ಸರ್ಕಾರಗಳು ಗಮನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಜಲಾಶಯ 130 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ 30 ಟಿಎಂಸಿ ಯಷ್ಟು ಹೂಳು ತುಂಬಿಕೊಂಡಿದೆ. ಅದನ್ನು ತೆರವುಗೊಳಿಸಿದ್ದರೇ ಇನ್ನೂ 30 ಟಿಎಂಸಿ ಹೆಚ್ಚು ನೀರು ಸಂಗ್ರಹವಾಗುತ್ತಿತ್ತು. ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದರೇ, ಜಲಾಶಯ ನೆಚ್ಚಿದ ನಮ್ಮ ರೈತರಿಗೆ ಎರಡು ಬೆಳೆಗೆ ನೀರು ದೊರೆಯುತ್ತಿತ್ತು. ಸದ್ಯ ಜಲಾಶಯದಲ್ಲಿ 99.456 ಟಿಎಂಸಿ ನೀರು ಸಂಗ್ರಹವಿದೆ ಎಂದರು.
ಕೂಡಲೇ ಸರ್ಕಾರ ಜಲಾಶಯದಲ್ಲಿ ಸಂಗ್ರಹವಾದ ಹೂಳನ್ನು ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ನಿರ್ಲಕ್ಷಿಸಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ದರೂರು ಕ್ಯಾಂಪ್ ವೀರಭದ್ರರಾವ್, ಕೊಂಚಿಗೇರಿ ಮಲ್ಲಪ್ಪ, ಮುಣ್ಟಗಟ್ಟೆ ಭೀಮನಗೌಡ, ಟಿ.ರಂಜಾನ್ ಸಾಬ್, ಚೆನ್ನಪಟ್ಟಣ ಶೆಕ್ಷಾವಲಿ, ಗೆಣಕಿಹಾಳ್ ಶರಣಗೌಡ ಹಾಗೂ ಆಂದ್ರದ ರೈತರಾದ ಸಮತಗೇರಿ ರಾಮರೆಡ್ಡಿ, ಹೊಳಗುಂದಿ ಗಾಳಿ ವೀರಭದ್ರಗೌಡ, ಆಲೂರು ಲಕ್ಷ್ಮೀಕಾಂತ್, ಹೊಳಗುಂದಿ ಕೃಷ್ಣಪ್ಪ, ದರೂರು ಕ್ಯಾಂಪ್ ಶ್ರೀಕಾಂತ, ದರೂರು ಬಸವರಾಜ ಗೌಡ, ವಿರೇಶ್ ಗೌಡ ಸೇರಿದಂತೆ ವಿವಿಧ ಮುಖಂಡರು, ಇತರರು ಇದ್ದರು.