ಬಳ್ಳಾರಿ: ಈಗಾಗಲೇ ತುಂಗಾ ಜಲಾಶಯದ ಇಂದಿನ ಹೊರ ಹರಿವು 70 ಸಾವಿರ ಕ್ಯೂಸೆಕ್ ಇದ್ದು, ತುಂಗಾ ಮೇಲ್ಬಾಗದಲ್ಲಿ ತುಂಬಾ ಮಳೆಯಾಗುತ್ತಿರುವುದರಿಂದ ಹೆಚ್ಚು ನೀರು ಜಲಾಶಯದಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನರು, ಜಾನುವಾರುಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗುರುತಿಸಲಾಗಿರುವ ತೀವ್ರ,ಮಧ್ಯಮ ಹಾಗೂ ಕಡಿಮೆ ಅಪಾಯದಲ್ಲಿರುವ ಗ್ರಾಮಗಳಿಗೆ ತಹಸೀಲ್ದಾರ್ ನೇತೃತ್ವದ ತಂಡಗಳು ತಕ್ಷಣ ಭೇಟಿ ನೀಡಿ ವಿಸ್ತೃತ ವರದಿ ನೀಡಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಖಡಕ್ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ತಹಸೀಲ್ದಾರರುಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಸಿರುಗುಪ್ಪ, ಹೊಸಪೇಟೆ ಮತ್ತು ಕಂಪ್ಲಿ ತಾಲೂಕಿನ ನದಿ ಪಾತ್ರದ ಗ್ರಾಮಗಳಿಗೆ ನೀರಿನಿಂದ ಹಾನಿಯಾಗಲಿದೆ. ಈ ಸಂಬಂಧಪಟ್ಟ ತಾಲೂಕಿನಲ್ಲಿ ಜನರು, ಜಾನುವಾರುಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಲು ತೀವ್ರ ಮತ್ತು ಮದ್ಯಮ ಹಾಗೂ ಕಡಿಮೆ ಅಪಾಯದಲ್ಲಿರುವ ಗ್ರಾಮಗಳನ್ನು ಗುರುತಿಸಿದ್ದು, ತೀವ್ರ ಮತ್ತು ಮದ್ಯಮ ಅಪಾಯದಲ್ಲಿರುವ ಗ್ರಾಮಗಳಿಗೆ ತಹಶೀಲ್ದಾರರು, ಪಿ.ಎಸ್.ಐ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ವರದಿ ನೀಡಬೇಕು ಎಂದು ಸೂಚನೆ ನೀಡಿದ ಡಿಸಿ ನಕುಲ್ ಅವರು ಹರಪನಹಳ್ಳಿ ತಾಲೂಕಿನಲ್ಲಿ ಪ್ರವಾಹ ಹೆಚ್ಚಾಗುವ ಸಂಭವವಿರುವುದರಿಂದ ಅಗ್ನಿ ಶಾಮಕ ದಳವು ತುರ್ತಾಗಿ ರಬ್ಬರ್ ಬೋಟ್ ಹಾಗೂ ಇತರೆ ಸಾಮಾಗ್ರಿಗಳೊಂದಿಗೆ ಹರಪನಹಳ್ಳಿಗೆ ತೆರಳಲು ಸೂಚಿಸಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಇತರರು ಇದ್ದರು.