ಮಂಡ್ಯ: ತಾಲೂಕಿನ ಎಲೆಚಾಕನಹಳ್ಳಿ ಸೇರಿದಂತೆ ಇತರೆ ಕೆರೆಗಳಿಗೆ ಏತ ನೀರಾವರಿ ಮೂಲಕ ಕೆರೆ ತುಂಬಿಸುವ 20 ಕೋಟಿ ರೂ. ವೆಚ್ಚದ ಕಾಮಗಾರಿ ಮಾಡಿ ಜನರಿಗೆ ನೀರು ಒದಗಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಋಣ ತೀರಿಸುವ ಸಮಾರಂಭವನ್ನು ಶೀಘ್ರ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡ ಎಲೆಚಾಕನಹಳ್ಳಿ ಬಸವರಾಜು ತಿಳಿಸಿದರು.
ತಾಲೂಕಿನ ಉರುಮಾರಕಸಲಗೆರೆ ಹಾಗೂ ಇನ್ನಿತರೆ ಐದು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಸಿಕೊಟ್ಟ ಹೇಮಲತಾ ಮತ್ತು ವೈ.ಬಿ.ಬಸವರಾಜು ದಂಪತಿಗಳಿಗೆ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ, ತುಂಬಿದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಎಲೆಚಾಕನಹಳ್ಳಿ, ಉರುಮಾರಕಸಲಗೆರೆ ಗ್ರಾಮಸ್ಥರು ಮುಖ್ಯವಾಗಿ ವ್ಯವಸಾಯವನ್ನೇ ಅವಲಂಭಿಸಿದ್ದು, ಒಣ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಪ್ರಾಮಾಣಿಕ ಪಾತ್ರ ವಹಿಸಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮಠಾಧೀಶರಿಂದ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಮಳೆ ಆಶ್ರಯವಾಗಿದ್ದ ಈ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾ ಎದುರಾಗಿತ್ತು. ಸಣ್ಣ ಕೆರೆಗಳಿಗೆ ಕಾವೇರಿ ಬ್ರಾಂಚ್ ಕೆನಾಲ್ನಿಂದ ಪೈಪ್ಲೈನ್ ಮೂಲಕ ನೀರು ಒದಗಿಸಿದರೆ, ಜನ-ಜಾನುವಾರುಗಳಿಗೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ಅಂತರ್ಜಲ ಹೆಚ್ಚಿಸಲು ಅನುಕೂಲವಾಗುತ್ತದೆ ಎಂದು ಜಲಸಂಪನ್ಮೂಲ ಖಾತೆ ನಿರ್ವಹಿಸುತ್ತಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಟ್ಟ ತಕ್ಷಣವೇ 20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು. ಇದರಿಂದಾಗಿ ಈ ಭಾಗದಲ್ಲಿ ನೀರು ಕಾಣುವಂತಾಯಿತು. ಈ ಹಿನ್ನಲೆಯಲ್ಲಿ ಜನತೆಯ ಋಣ ತೀರಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.