Monday, August 15, 2022

Latest Posts

ತುಂಬಿ ಹರಿಯುತ್ತಿರುವ ಕೆರೆ-ಕಟ್ಟೆಗಳು: ಬರದ ನಾಡಿನ ನೀರು ನೆರೆ ರಾಜ್ಯ ಆಂಧ್ರದ ಪಾಲು!

ಎಂ.ಜೆ.ತಿಪ್ಪೇಸ್ವಾಮಿ

ಚಿತ್ರದುರ್ಗ: ಬರದನಾಡು ಎಂದೇ ಹೆಸರಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಆಗಾಗ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತದೆ. ಅತಿವೃಷ್ಠಿಯಾಗಿ ಪ್ರವಾಹ ಸಂಭವಿಸಿದ್ದೂ ಉಂಟು. ಜಿಲ್ಲೆಯ ಇತಿಹಾಸ ಗಮನಿಸಿದರೆ ಬಹುತೇಕ ಸಂದರ್ಭದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದದ್ದೇ ಹೆಚ್ಚು. ಅಪರೂಪಕ್ಕೆ ಎಂಬಂತೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತದೆ. ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು ಭರ್ತಿಯಾಗುತ್ತವೆ. ಇವು ಕೆಲವೊಮ್ಮೆ ತುಂಬಿ ಹರಿದದ್ದೂ ಉಂಟು. ಹೀಗೆ ಹರಿಯುವ ಹೆಚ್ಚುವರಿ ನೀರು ನೆರೆಯ ಆಂಧ್ರಪ್ರದೇಶ ಸೇರುತ್ತದೆ. ಈ ನೀರನ್ನು ಹಿಡಿದಿಡುವ ಪ್ರಯತ್ನ ಇನ್ನೂ ನಡೆದಿಲ್ಲ ಎಂಬ ಆರೋಪ ಜಿಲ್ಲೆಯ ಜನರದ್ದು.
ದಾಖಲೆಗಳ ಪ್ರಕಾರ ಪ್ರತಿ ಮೂರು ಅಥವಾ ಐದು ವರ್ಷಕ್ಕೊಮ್ಮೆ ವಾಡಿಕೆಗಿಂತ ಹೆಚ್ಚು ಮಳೆ ಬೀಳುತ್ತದೆ. ೨೦೧೯ರ ಹಿಂಗಾರು ಮಳೆಗೆ ಹಲವು ಕೆರೆಗಳು ಒಡೆದು ಹೊಸದುರ್ಗ ತಾಲ್ಲೂಕಿನಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲದ ಬೆಟ್ಟ ಕುಸಿದು ಜನ ಆತಂಕಗೊಂಡಿದ್ದರು. ೨೦೧೦ರಲ್ಲಿ ಸುರಿದ ಭಾರೀ ಮಳೆಗೆ ಮುರುಘಾಮಠದ ಮುಂದಿನ ಕರೆ ಒಡೆದು ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಗೂನೂರು ಮಾರ್ಗದ ರಸ್ತೆ ಸಂಚಾರ ತಿಂಗಳಾನುಗಟ್ಟಲೆ ಕಡಿತವಾಗಿತ್ತು. ಈಗ ೨೦೨೦ ರಲ್ಲಿ ಬಿದ್ದ ಮಳೆಗೆ ಮತ್ತೆ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ.
ಹೊಸದುರ್ಗ ತಾಲ್ಲೂಕಿನಲ್ಲಿ ಸುರಿದ ಮಳೆನೀರು ವೇದಾವತಿಗೆ ಜೀವಕಳೆ ತುಂಬುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದರೆ ವಿ.ವಿ.ಸಾಗರದ ನೀರಿನ ಮಟ್ಟ ಹೆಚ್ಚಾಗುತ್ತದೆ. ೨೦೧೯ರಲ್ಲಿ ವಿ.ವಿ.ಸಾಗರಕ್ಕೆ ಅಂದಾಜು ಮೂರು ಟಿಎಂಸಿ ಅಡಿಯಷ್ಟು ಮಳೆ ನೀರು ಹರಿದುಬಂದಿತ್ತು. ಮಳೆ ನೀರಿನೊಂದಿಗೆ ಭದ್ರಾ ಜಲಾಶಯದ ನೀರು ಸೇರಿದ್ದರಿಂದ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲ್ಲೂಕಿನ ನೀರಿನ ಬವಣೆ ನೀಗಿತ್ತು. ಮಳೆ ನೀರು ಸಂಗ್ರಹಕ್ಕೆ ಮೈಸೂರು ಅರಸರು ಜಿಲ್ಲೆಯಲ್ಲೇ ಮಾದರಿಯೊಂದನ್ನು ರೂಪಿಸಿದ್ದಾರೆ. ಈ ವ್ಯವಸ್ಥೆ ಉಳಿದೆಡೆ ಕಾಣುತ್ತಿಲ್ಲ.
ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಬಿದ್ದ ಮಳೆ ನೀರು ಆಂಧ್ರಪ್ರದೇಶಕ್ಕೆ ಹರಿದು ಹೋಗುವ ವ್ಯವಸ್ಥೆ ನೈಸರ್ಗಿಕವಾಗಿ ಸೃಷ್ಟಿಯಾಗಿದೆ. ಐತಿಹಾಸಿಕ ಕಲ್ಲಿನ ಕೋಟೆಯ ಬೆಟ್ಟದ ಮೇಲೆ ಬಿದ್ದ ಮಳೆ ನೀರನ್ನು ಹಿಡಿದಿಡುವ ವ್ಯವಸ್ಥೆಯನ್ನು ಶತಮಾನಗಳ ಹಿಂದೆ ಪಾಳೇಗಾರರು ರೂಪಿಸಿದ್ದಾರೆ. ಕೋಟೆನಗರಿಯಲ್ಲಿ ನಿರ್ಮಿಸಿರುವ ಹೊಂಡ, ಕಲ್ಯಾಣಿ ಜಲಸಂರಕ್ಷಣೆಗೆ ಸಾಕ್ಷ್ಯವಾಗಿವೆ. ಇವು ಭರ್ತಿಯಾದರೆ ನೀರು ಮಲ್ಲಾಪುರ ಕೆರೆ ಸೇರುತ್ತದೆ. ಈ ಕೆರೆ ಕೋಡಿ ಬಿದ್ದರೆ ಗೋನೂರು, ದ್ಯಾಮೇನಹಳ್ಳಿ ಕೆರೆಗಳಿಗೆ ನೀರು ಹರಿಯುತ್ತದೆ. ಅಲ್ಲಿಂದ ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆ, ರಾಣಿಕೆರೆಗೆ ಹರಿದು ಜಿನಗಿ ಹಳ್ಳದ ಮೂಲಕ ಆಂಧ್ರಪ್ರದೇಶ ಸೇರುತ್ತದೆ.
ಹಿರಿಯೂರು ತಾಲ್ಲೂಕಿನಲ್ಲಿ ಬಿದ್ದ ಮಳೆ ನೀರು ವೇದಾವತಿ ನದಿ ಸೇರುತ್ತದೆ. ನದಿ ನೀರು ಹಿಡಿದಿಡುವ ಉದ್ದೇಶದಿಂದ ಇತ್ತೀಚೆಗೆ ಚಳ್ಳಕೆರೆ ತಾಲ್ಲೂಕಿನ ಚೌಳೂರು, ಪರಶುರಾಂಪುರ, ಪಗಡಲಬಂಡೆ, ಹರವಿಗೊಂಡನಹಳ್ಳಿ, ಜಾಜೂರು ಹಾಗೂ ನಾಗಗೊಂಡನಹಳ್ಳಿಯಲ್ಲಿ ಬ್ಯಾರೇಜುಗಳನ್ನು ನಿರ್ಮಿಸಲಾಗಿದೆ. ಇವು ಭರ್ತಿಯಾದರೆ ವೇದಾವತಿ ನೀರು ಆಂಧ್ರಪ್ರದೇಶದತ್ತ ಹರಿಯುತ್ತದೆ. ಚಳ್ಳಕೆರೆ ಹಾಗೂ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿಗಾಗಿ ವಿ.ವಿ.ಸಾಗರದಿಂದ ವೇದಾವತಿ ನದಿಗೆ ನೀರು ಹರಿಸಲಾಗಿತ್ತು. ಈ ನೀರು ಸಹ ಆಂಧ್ರಪ್ರದೇಶ ಸೇರಿತು ಎಂಬ ಆರೋಪ ಬೇಸಿಗೆಯಲ್ಲಿ ಕೇಳಿಬಂದಿತ್ತು.
ಆಂಧ್ರಪ್ರದೇಶಕ್ಕೆ ಹರಿಯುವ ನೀರನ್ನು ತಡೆದು ನಿಲ್ಲಿಸುವಂತೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕೂಗು ಕಳೆದ ಹಲವು ದಶಕಗಳಿಂದ ಕೇಳಿಬರುತ್ತಲೇ ಇದೆ. ದಾವಣಗೆರೆ ಜಿಲ್ಲೆಯ ಜಗಳೂರು ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾದರೆ ಮೊಳಕಾಲ್ಮುರು ತಾಲ್ಲೂಕಿನ ಜಿನಗಿಹಳ್ಳ ನದಿಯಂತೆ ತುಂಬಿ ಹರಿಯುತ್ತದೆ. ಈ ಹಳ್ಳಕ್ಕೆ ಬೃಹತ್ ಬ್ಯಾರೇಜ್ ನಿರ್ಮಿಸಿ ನೀರು ಹಿಡಿದಿಡಲು ಅವಕಾಶವಿದೆ. ರಂಗಯ್ಯನದುರ್ಗ ಜಲಾಶಯಕ್ಕೆ ಜಿನಗಿಹಳ್ಳದ ನೀರು ಹರಿಸುವ ಬಗ್ಗೆ ಚಿಂತನೆ ನಡೆದಿತ್ತು. ೫ ಕೋಟಿ ವೆಚ್ಚದ ಕ್ರಿಯಾ ಯೋಜನೆ ಕೂಡ ಸಿದ್ಧವಾಗಿತ್ತು. ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಇದು ಕಾರ್ಯರೂಪಕ್ಕೆ ಬರಲೇ ಇಲ್ಲ.
ದೇವಸಮುದ್ರ, ಚಿಕ್ಕೇರಹಳ್ಳ, ನಾಗಸಮುದ್ರ ಸೇರಿ ಹಲವು ಕೆರೆಗಳನ್ನು ಭರ್ತಿ ಮಾಡುವ ಬಗ್ಗೆಯೂ ಜನರಿಂದ ಒತ್ತಾಯ ಕೇಳಿಬಂದಿತ್ತು. ಆದರೆ ಅಂದಿನ ಜನಪ್ರತಿನಿಧಿಗಳು ಇದಕ್ಕೂ ಗಮನ ನೀಡಲಿಲ್ಲ. ಮಳೆನೀರು ಸರಾಗವಾಗಿ ಆಂಧ್ರಪ್ರದೇಶಕ್ಕೆ ಹರಿಯುತ್ತಿದೆ. ಆದಾಗ್ಯೂ ಈ ನೀರನ್ನು ಹಿಡಿದಿಡುವ ಬಗ್ಗೆ ಯಾವುದೇ ಪ್ರಯತ್ನ ಈವರೆಗೆ ನಡೆಯದಿರುವುದು ದುರಂತವೇ ಸರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss