ಚಿತ್ರದುರ್ಗ: ತುಮಕೂರು-ಚಿತ್ರದುರ್ಗ-ದಾವಣಗೆರೆ ನಗರಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ನೂತನ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ತಾಲ್ಲೂಕಿನಲ್ಲಿ ಬರುವ ೪೬.೫೮ ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣ ಸಲುವಾಗಿ ೨೫ ಗ್ರಾಮಗಳ ೪೪೪.೧೨ ಎಕರೆ ಭೂ-ಸ್ವಾಧೀನಕ್ಕಾಗಿ ಕ್ರಮ ಕೈಗೊಳ್ಳಲಾಗಿದ್ದು, ಭೂ-ಸ್ವಾಧೀನ ಕಾಯ್ದೆ ೨೦೧೩ ರನ್ವಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ಚಿತ್ರದುರ್ಗ ತಾಲೂಕಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಮಕೂರು-ಚಿತ್ರದುರ್ಗ-ದಾವಣಗೆರೆ ನೂತನ ರೈಲ್ವೆ ಮಾರ್ಗವು ೨೦೧.೪೭ ಕಿ.ಮೀ. ಇರಲಿದ್ದು, ಈ ನೇರ ಮಾರ್ಗದಿಂದ ತುಮಕೂರು-ದಾವಣಗೆರೆ ನಡುವಿನ ದೂರವನ್ನು ೫೩.೭೧ ಕಿ.ಮೀ. ಕಡಿಮೆಗೊಳಿಸಲಿದೆ ಎಂದರು.
ನೂತನ ರೈಲ್ವೆ ಮಾರ್ಗದಡಿ ಚಿತ್ರದುರ್ಗ ತಾಲೂಕಿನಲ್ಲಿ ೨೫ ಗ್ರಾಮಗಳ ಡಿ.ಎಸ್.ಹಳ್ಳಿ ಗ್ರಾಮದಿಂದ ಹಂಪನೂರು ಗ್ರಾಮದವರೆಗೆ ಒಟ್ಟು ೪೬.೫೮ ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಒಟ್ಟು ೪೪೪.೧೨ ಎಕರೆ ಭೂಮಿಯ ಅಗತ್ಯತೆ ಇದ್ದು, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕಳೆದ ಜೂ.೧೧ ರಂದು ಎಲ್ಲ ಗ್ರಾಮಗಳಲ್ಲಿ ಪುನರ್ ವ್ಯವಸ್ಥೆ ಮತ್ತು ಪುನರ್ ನಿರ್ಮಾಣ ಗ್ರಾಮಸಭೆಗಳನ್ನು ನಡೆಸಿ, ಬಾಧಿತರಿಂದ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.
ಯೋಜನಾ ವೆಚ್ಚ ೨೮೬.೫೭ ಕೋಟಿ ರೂ.ಗಳಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ, ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಯನ್ನು ಈ ವರ್ಷಾಂತ್ಯದೊಳಗೆ ಹೊರಡಿಸಿ, ರೈಲ್ವೆ ಇಲಾಖೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉದ್ದೇಶಿತ ನೂತನ ರೈಲ್ವೆ ಮಾರ್ಗದಲ್ಲಿ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು, ಕಸಬಾ ಮತ್ತು ಭರಮಸಾಗರ ಹೋಬಳಿ ವ್ಯಾಪ್ತಿಯಲ್ಲಿನ ೨೫ ಗ್ರಾಮಗಳ ವ್ಯಾಪ್ತಿಯ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಿದೆ. ಇದರಿಂದ ಬಾಧಿತರಾಗುವ ಸಂತ್ರಸ್ಥರಿಗೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಸೌಲಭ್ಯ ಕಲ್ಪಿಸಲು ಹಾಗೂ ಪರಾಮರ್ಶಿಸಲು ಹೊಸ ಭೂಸ್ವಾಧೀನ ಕಾಯ್ದೆ ೨೦೧೩ ರಂತೆ ಜಿಲ್ಲಾ ಮಟ್ಟದಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಯೋಜನಾ ಸಮಿತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ಎಂದು ಹೇಳಿದರು.
ಉದ್ದೇಶಿತ ನೂತನ ರೈಲ್ವೆ ಮಾರ್ಗದಲ್ಲಿ ಚಿತ್ರದುರ್ಗ ತಾಲೂಕಿನಲ್ಲಿ ದೊಡ್ಡಸಿದ್ದವ್ವನಹಳ್ಳಿ, ಸಿರಿಗೆರೆ, ಭರಮಸಾಗರ, ಚಿತ್ರದುರ್ಗ ಸೇರಿದಂತೆ ೦೪ ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ. ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ ಭೂಮಿಗೆ ಪರಿಹಾರ ಪಾವತಿ ಮಾಡಿ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಬೇಕಿದ್ದು, ನಿರ್ಮಾಣ ವೆಚ್ಚದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ಅರ್ಧ ವೆಚ್ಚ ಭರಿಸಲಿವೆ. ಯೋಜನೆಯಡಿ ತಾಲ್ಲೂಕಿನಲ್ಲಿ ಶೇ.೫೦ ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುವ ೦೯ ಕುಟುಂಬಗಳನ್ನು ಈಗಾಗಲೆ ಗುರುತಿಸಿದ್ದು, ಇವರಿಗೆ ನಿಯಮಾನುಸಾರ ಹೆಚ್ಚುವರಿ ೦೫ ಲಕ್ಷ ರೂ. ಪರಿಹಾರ ದೊರೆಯಲಿದೆ. ಅಲ್ಲದೆ ಮನೆ, ತೋಟ ಮತ್ತಿತರ ಆಸ್ತಿ-ಪಾಸ್ತಿ ಕಳೆದುಕೊಳ್ಳುವವರಿಗೂ ಪರಿಹಾರ ದೊರೆಯಲಿದೆ ಎಂದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಗ್ರಾಮಗಳಲ್ಲಿ ಜನ ದೊಡ್ಡ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿರುತ್ತಾರೆ. ಇಂತಹ ಮನೆ ಕಳೆದುಕೊಳ್ಳುವವರಿಗೆ ಸರ್ಕಾರಿ ಯೋಜನೆಯಡಿ ಸಣ್ಣ ನಿವೇಶನ ನೀಡಿ ಮನೆ ನಿರ್ಮಿಸಲು ನೆರವು ನೀಡಿದರೆ, ಬಾಧಿತರಿಗೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಮನೆ ಕಳೆದುಕೊಳ್ಳುವವರಿಗೆ ಬೇರೆ ಕಡೆ ನಿವೇಶನ ನೀಡಿ, ಮನೆ ಕಟ್ಟಿಕೊಡುವ ಬಗ್ಗೆ ಪರಿಶೀಲಿಸಬೇಕು. ಕುಟುಂಬಕ್ಕೆ ಆಸರೆಯಾಗಿರುವ ಮನೆ ಕಳೆದುಕೊಳ್ಳುವ ಸಂತ್ರಸ್ಥರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎಂದರು.
ಶೇ.೫೦ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುವವರಿಗೆ ಹೆಚ್ಚುವರಿ ಪರಿಹಾರವಾಗಿ ೦೫ ಲಕ್ಷ ರೂ. ನೀಡಲಾಗುತ್ತಿದ್ದು, ಇದು ಸುಮಾರು ೦೭ ವರ್ಷಗಳ ಹಳೆಯ ನಿಯಮವಾಗಿದೆ. ಈ ಮೊತ್ತ ಹೆಚ್ಚಿಸಲು ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಆ ಮೂಲಕ ಭೂಮಿ ಕಳೆದುಕೊಳ್ಳುವವರಿಗೆ ನ್ಯಾಯ ಒದಗಿಸಬೇಕೆಂದು ಎಂದು ಮನವಿ ಮಾಡಿದರು.
ಅಲ್ಲದೇ ಚಿತ್ರದುರ್ಗ ನಗರದಲ್ಲಿ ಈಗಿರುವ ರೈಲ್ವೆ ನಿಲ್ದಾಣದ ಜೊತೆಗೆ ತುರುವನೂರು ಮಾರ್ಗದಲ್ಲಿ ಇನ್ನೊಂದು ರೈಲ್ವೆ ನಿಲ್ದಾಣ ಕಂಟೋನ್ಮೆಂಟ್ ನಿರ್ಮಿಸುವುದು ಅಗತ್ಯವಿದೆ. ನಗರ ವ್ಯಾಪಕವಾಗಿ ಬೆಳೆಯುತ್ತಿದ್ದು, ಕಂಟೋನ್ಮೆಂಟ್ ನಿರ್ಮಾಣವಾದರೆ ಜನರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ರೈಲ್ವೆ ಯೋಜನೆಯಲ್ಲಿ ಇದನ್ನು ಸೇರ್ಪಡೆಗೊಳಿಸುವಂತೆ ಸೂಚನೆ ನೀಡಿದರು.
ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ನೂತನ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಈಗಾಗಲೆ ವಿಳಂಬವಾಗಿದ್ದು, ಆದಷ್ಟು ತ್ವರಿತಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಶೇ.೯೦ಕ್ಕೂ ಹೆಚ್ಚು ಭೂಮಿ ಕಳೆದುಕೊಂಡು, ಉಳಿಯುವ ಅಲ್ಪ ಪ್ರಮಾಣದ ಭೂಮಿಯಲ್ಲಿ ರೈತರು ಏನನ್ನೂ ಮಾಡಲು ಆಗುವುದಿಲ್ಲ. ಹೀಗಾಗಿ ರೈಲ್ವೆಯ ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು, ಅಂತಹ ರೈತರಿಗೆ ಪೂರ್ಣ ಸ್ವಾಧೀನವೆಂದು ಪರಿಗಣಿಸಿ ಪರಿಹಾರ ಮೊತ್ತವನ್ನು ನೀಡಬೇಕು. ಅಗತ್ಯಬಿದ್ದಲ್ಲಿ, ರೈಲ್ವೆ ಇಲಾಖೆಯು ಮುಂದಿನ ದಿನಗಳಲ್ಲಿ ಈ ಭೂಮಿ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಯೋಜನೆಯಡಿ ತಾಲೂಕಿನಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕಳೆದ ೨೦೧೮ ರ ನವೆಂಬರ್ ತಿಂಗಳಲ್ಲಿ ೧೧(೧) ಅಧಿಸೂಚನೆ ಪ್ರಕಟಗೊಂಡಿದೆ. ಕೋವಿಡ್ ರೋಗ ಭೀತಿಯಿಂದಾಗಿ ಪ್ರಕ್ರಿಯೆ ವಿಳಂಬವಾಗಿದ್ದು, ಪ್ರಕ್ರಿಯೆ ಮುಂದುವರೆಸಲು ಈ ವರ್ಷದ ಸೆಪ್ಟಂಬರ್ವರೆಗೆ ಕಾಲ ವಿಸ್ತರಣೆಗೆ ಅನುಮತಿ ದೊರೆತಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ಕೈಗೊಂಡು, ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು. ಬಳಿಕ ಅಂತಿಮ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಪ್ರಸನ್ನ ಮಾತನಾಡಿ, ಚಿತ್ರದುರ್ಗ ತಾಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಡಿ.ಎಸ್.ಹಳ್ಳಿ ಗ್ರಾಮದಲ್ಲಿ ೬೫ ಕುಟುಂಬಗಳು ಬಾಧಿತವಾಗಲಿವೆ. ಅದೇ ರೀತಿ ಹಂಪನೂರು-೩೧, ಚೀಳಂಗಿ-೧೦, ಜಟ್ಲಹಳ್ಳಿ-೧೧, ಕೊಳಹಾಳ್-೧೨, ಸಾದರಹಳ್ಳಿ-೧೧, ಮಾರಗಟ್ಟ-೨೫, ಚಿಕ್ಕಪುರ-೧೨, ಈಚಲನಾಗೇನಹಳ್ಳಿ-೨೦, ಕೆಳಗೋಟೆ-೧೪, ಸಿದ್ದಾಪುರ-೩೦, ಬಳ್ಳೆಕಟ್ಟೆ-೨೧, ವಿಜಾಪುರ-೨೪, ಲಕ್ಷ್ಮೀಸಾಗರ-೨೮, ಹಿರೇಬೆನ್ನೂರು-೧೦, ಚಿಕ್ಕಬೆನ್ನೂರು-೧೨ ಸೇರಿದಂತೆ ಒಟ್ಟಾರೆ ೨೫ ಗ್ರಾಮಗಳ ೩೮೯ ಕುಟುಂಬಗಳು ಬಾಧಿತವಾಗಲಿವೆ. ಈಗಾಗಲೇ ಗ್ರಾಮ ಸಭೆಗಳನ್ನು ನಡೆಸಿ, ಬಾಧಿತ ಕುಟುಂಬಗಳಿಂದ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ ಎಂದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶಶಿಕಲಾ, ನೈರುತ್ಯ ರೈಲ್ವೆ ಇಲಾಖೆಯ ಭೂಕೋರಿಕೆ ವಿಭಾಗದ ಸೀನಿಯರ್ ಸೆಕ್ಷನ್ ಇಂಜಿನಿಯರ್ ಶಶಿಧರ್, ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ್, ಚಿತ್ರದುರ್ಗ ತಾಲೂಕಿನ ಸಂಬಂಧಪಟ್ಟ ಗ್ರಾಮ ಪಂಚಾಯತ್ಗಳ ಅಧ್ಯಕ್ಷರು, ಕಂದಾಯ ಹಾಗೂ ಗ್ರಾ.ಪಂ.ಗಳ ಅಧಿಕಾರಿಗಳು ಭಾಗವಹಿಸಿದ್ದರು.