Monday, August 15, 2022

Latest Posts

ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆ ಮಾಡಲು ಸಿಎಂ ಬಿ.ಎಸ್.ವೈ ಗೆ ಮನವಿ

ಉಡುಪಿ: ರಾಜ್ಯದಲ್ಲಿ 18 ಲಕ್ಷಕ್ಕೂ ಅಧಿಕ ಜನರು ಮಾತನಾಡುವ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮನ್ನಣೆ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಮುಜರಾಯಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಕರಾವಳಿಯ ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ದೇಶದ ಬಹುತೇಕ ರಾಜ್ಯಗಳಲ್ಲಿ ತಮ್ಮ ತಮ್ಮ ರಾಜ್ಯದಲ್ಲಿರುವ ಉತ್ತಮ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಭಾಷೆಗಳನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಸಂವಿಧಾನದ ಆರ್ಟಿಕಲ್ 345- ಬಿ ಪ್ರಕಾರ ಘೋಷಿಸಿಕೊಳ್ಳಲಾಗಿದೆ. ಕಳೆದ 2011ನೇ ಜನಗಣತಿ ಪ್ರಕಾರ ಸುಮಾರು 18.05 ಲಕ್ಷ ಜನರು ಅಧಿಕೃತವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ.

ಕರ್ನಾಟಕ ತುಳು ಆಕಾಡೆಮಿ ಹಾಗೂ ತುಳು ಸಂಘ ಸಂಸ್ಥೆಗಳ ಪ್ರಕಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುಮಾರು 40 ಲಕ್ಷಕ್ಕೂ ಅಧಿಕ ತುಳು ಭಾಷಿಕರಿದ್ದಾರೆ. ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸುಮಾರು ಒಂದುವರೆ ಕೋಟಿಗಿಂತಲೂ ಅಧಿಕ ತುಳು ಭಾಷಿಕರಿರುವುದನ್ನು ಗುರುತಿಸಲಾಗಿದೆ.

ಈ ಎಲ್ಲ ಮಾಹಿತಿಗಳನ್ನು ಅವಲೋಕಿಸಿ ಸಕಾಲದಲ್ಲಿ ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆ ಎಂದು ಸಂವಿಧಾನದ ಆರ್ಟಿಕಲ್ 345 ರ ಪ್ರಕಾರ ಘೋಷಿಸಲು ರಾಜ್ಯ ಸರಕಾರವು ಅನುಸರಿಸಬೇಕಾದ ಮತ್ತು ಈಗಾಗಲೇ ಈ ಕುರಿತಾಗಿ ಕೈಗೊಂಡ ಕ್ರಮಗಳೊಂದಿಗೆ ಸಾಂವಿಧಾನಿಕ ನೀತಿ ನಿಯಮಗಳ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರ ಅನುಮೋದನೆಯನ್ನು ನೀಡುವಂತೆ ಆಗ್ರಹಿಸುವುದರ ಮೂಲಕ ತುಳುನಾಡಿನ ಸಮಸ್ತರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಬೇಕೆಂದು ಕರಾವಳಿ ಜಿಲ್ಲೆಯ ಶಾಸಕರೆಲ್ಲರೂ ವಿಜ್ಞಾಪಿಸಿಕೊಳ್ಳುತ್ತೇವೆ ಎಂದು ಶಾಸಕರ ನಿಯೋಗ ಮುಖ್ಯಮಂತ್ರಿಗಳನ್ನು ಕೋರಿದೆ.

ಮುಂದಿನ ತಿಂಗಳು ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತಾದ ಸಾಂವಿಧಾನಿಕ ಕಾನೂನುಗಳ ಪ್ರಕಾರ ಪ್ರಸ್ತಾವನೆಯನ್ನು ಮಂಡಿಸಿ, ಅನುಮೋದನೆಯನ್ನು ಪಡೆದು ಕೇಂದ್ರ ಸರಕಾರಕ್ಕೆ ಸಲ್ಲಿಸುವ ಮತ್ತು ಅಲ್ಲಿಂದ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಅತ್ಯಗತ್ಯವಾಗಿ ಕೈಗೊಳ್ಳಬೇಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಸಚಿವರಾದಿಯಾಗಿ ಶಾಸಕರೆಲ್ಲರೂ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಮೂಲ್ಕಿ- ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಶಾಂತಾರಾಮ‌ ಸಿದ್ಧಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss