Friday, March 5, 2021

Latest Posts

ತೆಂಗು, ಅಡಿಕೆ, ಬಾಳೆ ರುಗೋಸ್ ಸುಳಿಯಾಕಾರದ ಬಿಳಿ ನೊಣದ ಬಾದೆಯೇ… ಇಲ್ಲಿ ಓದಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಜಿಲ್ಲೆಯ ಕೆಲವು ಭಾಗಗಳಲ್ಲಿ ತೆಂಗು, ಅಡಿಕೆ ಹಾಗೂ ಬಾಳೆ ಗಿಡಗಳಲ್ಲಿ ರುಗೋಸ್ ಸುಳಿಯಾಕಾರದ ಬಿಳಿ ನೊಣದ ಹಾವಳಿ ಕಂಡು ಬಂದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಅಡಿಕೆ ಗಿಡಗಳಲ್ಲಿ ಸಂತಾನೋತ್ಪತ್ತಿ ಮಾಡುವ ಈ ನೊಣಗಳು ಕೆಲವಡೆ ತರಕಾರಿ ಮತ್ತು ಅಲಂಕಾರಿಕ ಗಿಡಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ರೈತರು ಮುಂಜಾಗ್ರತೆಯಾಗಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಹಾರ್ಟಿಕ್ಲಿನಿಕ್ ವಿಷಯ ತಜ್ಞ ಯಶವಂತ ಕುಮಾರ್ ಸಲಹೆ ಮಾಡಿದ್ದಾರೆ.

ಹಾನಿ ಲಕ್ಷಣಗಳು
ಮರಿಗಳು ಹಾಗೂ ಫ್ರೌಢಕೀಟಗಳು ಸತತವಾಗಿ ಎಲೆಗಳ ಕೆಳಭಾಗದಲ್ಲಿ ಕುಳಿತು ರಸ ಹೀರುತ್ತವೆ. ಇದರಿಂದ ನೀರು ಮತ್ತು ಪೌಷ್ಠಿಕಾಂಶಗಳನ್ನು ತೆಗೆದು ಹಾಕುವುದರಿಂದ ತೆಂಗಿನ ಎಲೆಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಇದರಿಂದಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು, ಮುದುಡುವುದರ ಜೊತೆಗೆ ಕ್ರಮೇಣವಾಗಿ ಒಣಗಲು ಪ್ರಾರಂಭಿಸುತ್ತವೆ.
ಕೀಟಗಳ ವ್ಯಾಪಕವಾದ ರಸ ಹೀರುವಿಕೆಯಿಂದ ಸಿಹಿ ದ್ರವ ಸ್ರವಿಸುತ್ತದೆ. ಇದು ಕೆಳಗಿನ ಎಲೆಗಳ ಮೇಲ್ಭಾಗದಲ್ಲಿ ಮತ್ತು ಅಂತರ ಬೆಳೆಗಳ ಮೇಲೆ ಸಂಗ್ರಹವಾಗಿ ಇರುವೆಗಳನ್ನು ಆಕರ್ಷಿಸುತ್ತದೆ ಮತ್ತು ಕ್ಯಾಪ್ನೋಡಿಯಂ ಎಂಬ ಶಿಲೀಂಧ್ರದ ಬೆಳೆವಣಿಗೆಯನ್ನು ಪ್ರೋತ್ಸಾಹಿಸುತ್ತದೆ. ಇದರಿಂದ ಎಲೆಗಳ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಶಿಲೀಂಧ್ರ ಮಸಿ ಬಳಿದಂತೆ ಕಾಣಿಸಿಕೊಳ್ಳುತ್ತದೆ ಹಾಗೂ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುತ್ತದೆ ರೈತರು ಇಂತಹ ಲಕ್ಷಣಗಳನ್ನು ಗುರುತಿಸಿ ಪ್ರಾರಂಭದಲ್ಲೇ ರೋಗ ನಿವಾರಣೆಗೆ ಉಪಚಾರ ಕ್ರಮಗಳನ್ನು ಕೈಗೊಳ್ಳಬೇಕು.

ಬಿಳಿ ನೊಣದ ಲಕ್ಷಣಗಳು
ಇದು ರಸ ಹೀರುವ ಕೀಟವಾಗಿದ್ದು, ಗಾತ್ರದಲ್ಲಿ ಚಿಕ್ಕದಾಗಿದ್ದು, ಮೈತುಂಬ ಬಿಳಿ ಬಣ್ಣದ ಮೇಣದಂತಹ ಹುಡಿ ಇರುತ್ತದೆ. ಕೀಟವು ಹಳದಿ ಮೈ ಬಣ್ಣದಿಂದ ಕೂಡಿದ್ದು, 4 ಬಿಳಿ ಬಣ್ಣದ ರೆಕ್ಕೆಗಳನ್ನು ಹೊಂದಿದೆ. ಈ ಕೀಟವು ತನ್ನ ಎಲ್ಲಾ ಜೀವನದ ಅವಧಿಯನ್ನು ಎಲೆಗಳ ಕೆಳಭಾಗದಲ್ಲಿ ಕಳೆಯುತ್ತದೆ. ಕೀಟವು ಪ್ರಾರಂಭಿಕ ಹಂತದಲ್ಲಿ ಎಲೆಗಳ ಆಡಿಯಲ್ಲಿ ವೃತ್ತಾಕಾರದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಕೀಟವು ಗಾಳಿಯ ಮೂಲಕ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹರಡುತ್ತದೆ.

ನಿಯಂತ್ರಣ ಕ್ರಮ
ಕೀಟಬಾಧೆಗೆ ಒಳಪಟ್ಟ ಗಿಡಗಳ ಎಲೆಗಳನ್ನು ಕಿತ್ತು ತೆಗೆದು ಸುಡಬೇಕು. ಕೀಟ-ಪೀಡಿತ ವಲಯಗಳಿಂದ ತೆಂಗಿನ ಸಸಿಗಳು ಉಪಯೋಗಿಸುವಂತಹ ವಸ್ತುಗಳು, ಮಣ್ಣು ಮತ್ತು ಸಾವಯವ ವಸ್ತುಗಳು ಇತ್ಯಾದಿ ಸಾಗಿಸುವ ಮುನ್ನ ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡಿಸಬೇಕು.
ಹಳದಿ ಬಣ್ಣದ ಬಲೆಗಳನ್ನು ಅಥವಾ ಹಳದಿ ಬಣ್ಣದ ಡ್ರಾಯಿಂಗ್ ಪೇಪರ್‍ಗೆ ಹರಳೆಣ್ಣೆ ಹಚ್ಚಿ ಅಲ್ಲಲ್ಲಿ ತೋಟದಲ್ಲಿ ನೇತು ಹಾಕಬೇಕು. ಹಳದಿ ಬಣ್ಣವು ಕೀಟವನ್ನು ಆಕರ್ಷಿಸುವುದರಿಂದ ಕೀಟಗಳ ಬಲೆಗಳಿಗೆ ಅಂಟಿಕೊಳ್ಳುತ್ತವೆ. ಎನ್ಕಾರ್ಸಿಯಾ ಗ್ವಾಡೆಲೊಪೆ ಹಾಗೂ ಎನ್ಕಾರ್ಸಿಯಾ ಡಿಸ್ಟರ್ಸಾ ಎಂಬ ಎರಡು ಪರಾವಲಂಬಿ ಕೀಟಗಳು ಬಿಳಿನೋಣದ ಮೊಟ್ಟೆಗಳನ್ನು ತಿಂದು ಬದುಕುವುದರಿಂದ ಈ ಕೀಟಗಳ ಸಂತತಿ ಬೆಳೆಯುವಂತೆ ಮಾಡಬೇಕಾಗಿರುವುದರಿಂದ ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಬೇಕಾಗಿರುತ್ತದೆ.
ತೋಟದ ಪರಿಸರದ ವ್ಯವಸ್ಥೆಯಲ್ಲಿ ಕಪ್ಪು ಶಿಲೀಂಧ್ರವನ್ನು ಭಕ್ಷಿಸುವ ಜೀರುಂಡೆ ಲಿಯೋಕ್ರಿನಸ್ ನೀಲ್ಗೀರಿಯಾನಸ್ ಹುಳಗಳನ್ನು ಸಂರಕ್ಷಿಸಬೇಕು. ಎಲೆಗಳ ಕೆಳಭಾಗದಲ್ಲಿ ಕೂತಿರುವ ಕೀಟಗಳಿಗೆ ನೀರು ಬಿಡಬೇಕು ಹಾಗೂ ಎಲೆಗಳ ಮೇಲೆ ಬೆಳೆದಿರುವ ಕಪ್ಪು ಶಿಲೀಂಧ್ರ ನಿಯಂತ್ರಿಸಲು ಗಂಜಿ ನೀರನ್ನು ಉಪಯೋಗಿಸಬೇಕು. ಕೀಟಗಳ ಬಾಧೆ ತೀವ್ರವಾಗಿದ್ದು, ಗಿಡಗಳ ಎತ್ತರ ಕಡಿಮೆ ಇದ್ದಲ್ಲಿ ಶೇ 0.5 ಬೇವಿನ ಎಣ್ಣೆ ಮತ್ತು 2.5 ಮೀ.ಲೀ ಶ್ಯಾಂಪು ಒಂದು ಲೀಟರ್ ನೀರಿಗೆ ಬೆರೆಸಿ ಮರಗಳಿಗೆ ಸಿಂಪಡಿಸಬೇಕು ಎಂದು ಸಲಹೆ ಮಾಡಲಾಗಿದೆ.
ರೈತರಿಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಮೊ.ಸಂ:8618186586 ಅಥವಾ ಚಿಕ್ಕಮಗಳೂರು ತೋಟಗಾರಿಕೆ ಮಾಹಿತಿ ಸಲಹಾ ಕೇಂದ್ರ ದೂ.ಸಂ:08262-295043 ಹಾಗೂ ಹತ್ತಿರದ ತೋಟಗಾರಿಕೆ ಇಲಾಖೆಯ ಆರ್.ಎಸ್.ಕೆ. ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಯಶವಂತ್ ಕುಮಾರ್ ತಿಳಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss