ಬೆಂಗಳೂರು: ಬೆಂಬಲ ಬೆಲೆಯಲ್ಲಿ ರೈತರ ತೊಗರಿ ಖರೀದಿ ಮೀತಿ 10 ರಿಂದ 20 ಕ್ವಿಂಟಾಲ್ ಗೆ ಹೆಚ್ಚಿಸಿದ್ದು, ಆ ಹಿನ್ನೆಲೆಯಲ್ಲಿ ರೈತರ ನೋಂದಣಿಯನ್ನು ಫೆ.25ರವರೆಗೆ ಹಾಗೂ ಖರೀದಿ ಪ್ರಕ್ರಿಯೆಯನ್ನು ಮಾ.15ರವರೆಗೆ ವಿಸ್ತರಿಸಲಾಗಿದೆ.
ಗುಣಮಟ್ಟದ ತೊಗರಿ ಪ್ರತಿ ಕ್ವಿಂಟಾಲ್ಗೆ 5800 ರೂ. ಹಾಗೂ ರಾಜ್ಯ ಸರ್ಕಾರದಿಂದ 300 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ರೈತರಿಂದ ಗರಿಷ್ಠ 10 ಕ್ವಿಂಟಾಲ್ ತೊಗರಿ ಖರೀದಿಗೆ ನಿರ್ಣಯ ಕೈಗೊಳ್ಳಲಾಗಿದೆ.
ಫೆ.18 ರ ಅಂತ್ಯಕ್ಕೆ ಒಟ್ಟು 3,00,111 ರೈತರು ಖರೀದಿ ಸಂಸ್ಥೆಯೊಂದಿಗೆ ನೋಂದಣಿ ಮಾಡಿಕೊಂಡಿದ್ದು, 3,45,106 ಕ್ವಿಂಟಾಲ್ ತೊಗರಿಯನ್ನು ಒಟ್ಟು 39,091 ರೈತರಿಂದ ಖರೀದಿಸಿದೆ ಎಂದು ಬುಧವಾರ ವಿಧಾನ ಪರಿಷತ್ ಕಲಾಪದಲ್ಲಿ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಹಕಾರ ಸಚಿವರ ಪರವಾಗಿ ಪ್ರಕಟಿಸಿದರು.
ರಾಜ್ಯದಲ್ಲಿ ರೈತರು ತೊಗರಿಯನ್ನು ಹೆಚ್ಚಾಗಿ ಬೆಳೆದಿದ್ದರಿಂದ ಪ್ರತಿ ರೈತರಿಂದ 25 ಕ್ವಿಂಟಾಲ್ ತೊಗರಿ ಖರೀದಿಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿಗಳು ಕೇಂದ್ರ ಕೃಷಿ ಸಚಿವರಿಗೆ ಹಾಗೂ ಕೇಂದ್ರ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದ್ದರು.ಆ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಲ್ಲಿ 106 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಇದರಲ್ಲಿ ಫೆ.18ರ ಅಂತ್ಯಕ್ಕೆ 47,419 ರೈತರು ನೋಂದಣಿ ಮಾಡಿಸಿಕೊಂಡಿದ್ದು, 9,579 ರೈತರಿಂದ 66,741 ಕ್ವಿಂಟಾಲ್ ತೊಗರಿಯನ್ನು ಈಗಾಗಲೇ ಖರೀದಿಸಿದೆ ಎಂದು ತಿಳಿಸಿದರು.
ತೊಗರಿ ಬೆಳೆಯುವ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ನ್ಯಾಫೆಡ್ ಸಂಸ್ಥೆಯು ರಾಜ್ಯ ಸರ್ಕಾರದ ಮಾರ್ಕ್ಫೆಡ್ ಹಾಗೂ ತೊಗರಿ ಅಭಿವೃದ್ಧಿ ಮಂಡಳಿ ಮೂಲಕ ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ. ರೈತರ ಸಹಕಾರದೊಂದಿಗೆ ಈಗಾಗಲೇ ಆದೇಶಿಸಿರುವಂತೆ ಪೂರ್ಣ ಪ್ರಮಾಣದ ತೊಗರಿ ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.