Friday, July 1, 2022

Latest Posts

ತೋಟದ ಮನೆಗೆ ನುಗ್ಗಿ ದರೋಡೆ: ಸಿನಿಮೀಯ ಕಾರ್ಯಾಚರಣೆ, ಮೂವರ ಬಂಧನ

ಗುಂಡ್ಲುಪೇಟೆ : ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ಗ್ರಾಮ ಹೊಂಗಹಳ್ಳಿಯಲ್ಲಿ ಗುರುವಾರ ರಾತ್ರಿ ತೋಟದ ಮನೆಯೊಂದರಲ್ಲಿ ದರೋಡೆ ನಡೆದಿದ್ದು, ಸಿನಿಮೀಯ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿದ ಪೋಲೀಸರು ಮೂವರನ್ನು ಬಂಧಿಸಿದ್ದಾರೆ. ತಾಲೂಕಿನ ಹೊಂಗಹಳ್ಳಿಯ ಹೊರವಲಯದಲ್ಲಿ ಜಮೀನೊಂದನ್ನು ಗುತ್ತಿಗೆಗೆ ಪಡೆದು ವ್ಯವಸಾಯ ಮಾಡುತ್ತಿರುವ ಕೇರಳ ಮೂಲದ ಪ್ರದೀಪ್ ಎಂಬಾತನ ಗುಡಿಸಲಿನಲ್ಲಿ ಘಟನೆ ನಡೆದಿದೆ.
ಗುಂಡ್ಲುಪೇಟೆ ಪೋಲೀಸರು ಘಟನೆ ನಡೆದ ಎರಡು ಗಂಟೆಗಳಲ್ಲಿಯೇ ಆರೋಪಿಗಳಾದ ಕೋಡಹಳ್ಳಿಯ ರವಿ, ಗುಂಡ್ಲುಪೇಟೆ ಪಟ್ಟಣದ ಅರಳೀಕಟ್ಟೆ ಬೀದಿಯ ನಿವಾಸಿ ಸಿದ್ದು, ಮೂಖಹಳ್ಳಿ ಕಾಲೋನಿ(ಎನ್. ರಾಚಯ್ಯನಗರ) ನಿವಾಸಿ ಕುಮಾರ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ವಿವರ : ತಾಲೂಕಿನ ಹೊಂಗಹಳ್ಳಿಯ ಹೊರವಲಯದಲ್ಲಿ ಕೇರಳ ಮೂಲದ ಪ್ರದೀಪ್ ಎಂಬಾತ ಹೆಚ್.ಬಿ. ನಾಗರಾಜು ಎಂಬುವವರ ಜಮೀನನ್ನು ಗುತ್ತಿಗೆಗೆ ಪಡೆದು ವ್ಯವಸಾಯ ಮಾಡುತ್ತಿದ್ದಾರೆ. ಗುರುವಾರ ರಾತ್ರಿ 10. 20 ಗಂಟೆಯ ಸಮಯದಲ್ಲಿ ಮೂವರು ದರೋಡೆಕೋರರ ತಂಡ ತೋಟದೊಳಕ್ಕೆ ನುಗ್ಗಿದೆ. ಬಾಗಿಲು ತೆರೆದು ಹೊರಕ್ಕೆ ಬರಲೆತ್ನಿಸಿದ ಮಾಲೀಕ ಪ್ರದೀಪ್ ಕಣ್ಣಿಗೆ ಖಾರದಪುಡಿ ಎರಚಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ನಂತರ ನಗದು ಹಣ ಮತ್ತು ಚಿನ್ನದ ಚೈನ್ ಮತ್ತು ಆಭರಣ ನೀಡುವಂತೆ ಇಲ್ಲವಾದಲ್ಲಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಆ ಈ ವೇಳೆ ಪ್ರದೀಪ್ ಅವರ ಪುತ್ರಿ ದರೋಡೆಕೋರನೊಬ್ಬನಿಗೆ ರಾಡ್ ನಿಂದ ಹೊಡೆದ ಪರಿಣಾಮ ಸ್ಥಳದಲ್ಲೇ ಆತ ಕುಸಿದು ಬಿದ್ದಿದ್ದಾನೆ. ಕೂಡಲೇ ಪ್ರದೀಪ್ ಕತ್ತಿನಲ್ಲಿದ್ದ ೩೨ ಗ್ರಾಂ ಚಿನ್ನದ ಸರ ಮತ್ತು ಅವರ ಪತ್ನಿಯ ಬಳಿಯಿದ್ದ ೪೦ ಗ್ರಾಂ ಚಿನ್ನದ ಸರವನ್ನು ಕಿತ್ತೊಯ್ದ ದರೋಡೆಕೋರರು ಪರಾರಿಯಾಗಿದ್ದಾರೆ. ಕೂಡಲೇ ಗ್ರಾಮಸ್ಥರಿಗೆ ಮಾಲೀಕ ಪ್ರದೀಪ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮಸ್ಥರು ಪೋಲೀಸರಿಗೆ ವಿಷಯ ತಿಳಿಸಿ , ಕುಸಿದು ಬಿದ್ದಿದ್ದ ದರೋಡೆಕೋರನನ್ನು ಕೈ ಕಾಲು ಕಟ್ಟಿ ಹಾಕಿ ಹೊರಗೆ ಮಲಗಿಸಿದ್ದಾರೆ. ಸ್ಥಳಕ್ಕೆ ಬಂದ ಪೋಲೀಸರು ಮಾಲೀಕ ಪ್ರದೀಪ್ ಮತ್ತು ಸಿಕ್ಕಿಬಿದ್ದ ದರೋಡೆಕೋರನಿಗೆ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಸಿನಿಮೀಯ ಕಾರ್ಯಾಚರಣೆ : ದರೋಡೆಕೋರನಿಗೆ ಚಿಕಿತ್ಸೆ ನೀಡಿದ ನಂತರ ವಿಚಾರಣೆ ನಡೆಸಿದಾಗ ಆತ ಇತರ ಇಬ್ಬರ ಬಗ್ಗೆ ಸುಳಿವು‌ ನೀಡಿದ್ದಾನೆ. ಕಗ್ಗಳದಹುಂಡಿ ಬಸ್ ನಿಲ್ದಾಣದ ಬಳಿ ಪ್ರದೀಪ್ ನನ್ನು ಬಂಧಿಸಿದ ಪೋಲೀಸರು ಮೂಖಹಳ್ಳಿ ಕಾಲೋನಿಯ ನಿವಾಸದಿಂದ ಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ. ಇತರ ಇಬ್ಬರು ಆರೋಪಿಗಳಿಗೆ ಶೋಧ ನಡೆಸುತ್ತಿರುವ ಪೋಲೀಸರು ಒಬ್ಬನನ್ನು ಹೊಂಗಳ್ಳಿ ಗ್ರಾಮದ ವ್ಯಕ್ತಿ ಎಂಬುದಾಗಿ ಗುರುತಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ಮಹದೇವಸ್ವಾಮಿ, ಪಿಎಸ್ ಐ ರಾಜೇಂದ್ರ , ಸಿಬ್ಬಂದಿಗಳಾದ ಮಹೇಶ್, ಪ್ರಸಾದ್, ಹಸಗೂಲಿ ರವಿ , ಹೊರೆಯಾಲ‌ ಮಹದೇವಸ್ವಾಮಿ ಅವರು ಮಿಂಚಿನ ಕಾರ್ಯಾಚರಣೆ ತಂಡದಲ್ಲಿದ್ದರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಅನಿತಾ.ಬಿ. ಹದ್ದಣ್ಣನವರ್, ಡಿವೈಎಸ್ ಪಿ ಅನ್ಸರ್ ಅಲಿ, ಸಿಬ್ಬಂದಿಗಳಾದ ಶಂಕರಪ್ಪ, ಶಿವನಂಜಪ್ಪ, ಪ್ರಭುಸ್ವಾಮಿ, ಸಿದ್ದರಾಮು ಭೇಟಿ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss