ಹೊಸ ದಿಗಂತ ವರದಿ , ಶಿವಮೊಗ್ಗ:
ಸಮೀಪದ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಎಮು ಪಕ್ಷಿಯೊಂದು ಮೃತಪಟ್ಟಿದೆ. ಹಕ್ಕಿ ಜ್ವರದ ಆತಂಕದ ಹಿನ್ನೆಲೆಯಲ್ಲಿ ಪಕ್ಷಿಯ ದೇಹದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಸಿಂಹ ಧಾಮದಲ್ಲಿ ಆರು ಎಮು ಪಕ್ಷಿಗಳಿದ್ದವು. ಈಗ ಮೊಟ್ಟೆ ಇಡುವ ಸಮಯವಾಗಿದ್ದು, ಗಂಡು ಎಮುಗಳು ಕಾದಾಡುತ್ತವೆ. ಇದರಿಂದಾಗಿ ಒಂದು ಪಕ್ಷಿ ಮೃತಪಟ್ಟಿರಬಹುದು. ಸ್ಥಳೀಯ ಪಶು ವೈದ್ಯಕೀಯ ಕಾಲೇಜಿನ ಪರಿಣಿತರ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ. ಇದರಲ್ಲಿ ಗಾಯಗೊಂಡು ಮೃತಪಟ್ಟ ಮಾಹಿತಿ ಲಭಿಸಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮಾದರಿ ರವಾನಿಸಲಾಗಿದೆ ಎಂದು ಸಿಂಹಧಾಮದ ನಿರ್ದೇಶಕ ಮುಕುಂದಚಂದ್ರ ಹೊಸದಿಗಂತಕ್ಕೆ ತಿಳಿಸಿದ್ದಾರೆ.
ಈಗ ಎಮುಗಳ ಸಂಖ್ಯೆ ಐದಕ್ಕೆ ಇಳಿದಿದೆ.