ಮಂಗಳೂರು: ನಗರದ ಪಡೀಲ್ ನ ಫಸ್ಟ್ ನ್ಯೂರೋ ಆಸ್ಪತ್ರೆ ಮೂಲದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣದ ಸರಣಿ ಮುಂದುವರೆದಿದೆ.
ಮಂಗಳವಾರ ಜಿಲ್ಲೆಯಲ್ಲಿ ಇಬ್ಬರಿಗೆ ಕೊರೋನಾ ಕಾಣಿಸಿಕೊಂಡಿದ್ದು, ಇಬ್ಬರೂ ಫಸ್ಟ್ ನ್ಯೂರೋ ಆಸ್ಪತ್ರೆಯ ಚಿಕಿತ್ಸೆ ಪಡೆದವರ ಸಂಪರ್ಕದಲ್ಲಿದ್ದರು. ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಯಲ್ಲಿ ಇರುವಾಗ ಸೋಂಕು ಅಂಟಿಸಿಕೊಂಡಿದ್ದ, ಪ್ರಸ್ತುತ ವೆನ್ಲಾಕ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರು ಕುಲಶೇಖರ ನಿವಾಸಿ 80 ವರ್ಷದ ಮಹಿಳೆ ಪಿ.507 ಅವರಿಂದ ಮಂಗಳವಾರ ಇಬ್ಬರಿಗೆ ಕೊರೋನಾ ಕಾಣಿಸಿಕೊಂಡಿದೆ.
ಕುಲಶೇಖರ ಮಹಿಳೆಯ ಸಂಪರ್ಕದಲ್ಲಿದ್ದ 50 ವರ್ಷದ ಮಹಿಳೆಯ 12 ನೇ ದಿನದ ಗಂಟಲ ದ್ರವ ಪರೀಕ್ಷಾ ವರದಿ ಸ್ವೀಕೃತವಾಗಿದ್ದು, ಇವರಿಗೆ ಕೊರೋನಾ ದೃಢಪಟ್ಟಿದೆ. ಇವರ ಸಂಪರ್ಕದಲ್ಲಿದ್ದ 26 ವರ್ಷದ ಪುರುಷನ ಪರೀಕ್ಷಾ ವರದಿಯಲ್ಲಿಯೂ ಕೊರೋನಾ ಇರುವುದು ದೃಢಪಟ್ಟಿದೆ. ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿವಾಸಿಗಳು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ.
ಮಂಗಳವಾರದ ಎರಡು ಪಾಸಿಟಿವ್ ಪ್ರಕರಣ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.