ಕುಪ್ಪೆಪದವು: ಕಿಡ್ನಿ ವೈಫಲ್ಯದಿಂದ ಮೃತಪಟ್ಟ ಮುಂಬೈ ನಿಂದ ಬಂದಿದ್ದ ಯುವಕನಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕುಪ್ಪೆಪದವು ಸಮೀಪದ ಆಚಾರಿಜೋರ ಎರ್ಮಾಳ ದಲ್ಲಿ ಮೃತ ಯುವಕನ ಮನೆಯ ಸುತ್ತಮುತ್ತ 50 ಮೀಟರ್ ಅಂತರದಲ್ಲಿ ಮೂರು ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಮುಂಬೈ ನಲ್ಲಿದ್ದ 25 ವರ್ಷದ ಯುವಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಕಳೆದ ತಿಂಗಳ 27 ರಂದು ಊರಿಗೆ ಮರಳಿದ್ದ. ಮುಂಬೈ ನಿಂದ ಮಂಗಳೂರಿಗೆ ಬಂದಿದ್ದು ಒಂದು ದಿನ ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಿದ ನಂತರ ಕುಪ್ಪೆಪದವಿನಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.ಕಿಡ್ನಿ ಸಮಸ್ಯೆಗೆ ಈತ ಆಯುರ್ವೇದ ಔಷದಿ ತೆಗೆದುಕೊಳ್ಳುತ್ತಿದ್ದ.ಈ ಔಷಧಿ ತೆಗೆದುಕೊಳ್ಳಲು ಕ್ವಾರಂಟೈನ್ ಕೇಂದ್ರದಲ್ಲಿ ಅಸಾಧ್ಯ ವಾದುದರಿಂದ ಎರಡು ದಿನಗಳನಂತರ ಆತನ ಮನೆಗೆ ಕಳುಹಿಸಲಾಗಿತ್ತು. 11 ರ ಗುರುವಾರ ರಾತ್ರಿ ಈತನ ಆರೋಗ್ಯದಲ್ಲಿ ವ್ಯತ್ಯಯ ವಾದುದರಿಂದ ಶುಕ್ರವಾರ ಬೆಳಿಗ್ಗೆ ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಂದು ರಾತ್ರಿ ಯುವಕ ಮೃತಪಟ್ಟಿದ್ದಾನೆ. ಈತನ ಗಂಟಲ ದ್ರವದ ವರದಿಯಲ್ಲಿ ಪಾಸಿಟಿವ್ ಕಂಡುಬಂದಿದೆ.
ಗುರುವಾರ ಯುವಕನಿಗೆ ಆರೋಗ್ಯ ಬಿಗಡಾಯಿಸಿದ ವೇಳೆ ಹಲವಾರು ಆತನ ಮನೆಗೆ ತೆರಳಿದ್ದರು ಅಲ್ಲದೆ ಶುಕ್ರವಾರ ಆಸ್ಪತ್ರೆಗೆ ಸಾಗಿಸುವಾಗಲೂ ಹಲವಾರು ಭಾಗಿಗಳಾಗಿದ್ದರು.
ವೈದ್ಯಾಧಿಕಾರಿಗಳು, ಪಿಡಿಓ, ಗ್ರಾಮಕರಣಿಕರು, ಬಜಪೆ ಪೊಲೀಸರು ಭೇಟಿ ನೀಡಿ ಅಗತ್ಯಕ್ರಮ ಕೈಗೊಂಡಿದ್ದಾರೆ.
ಕುಪ್ಪೆಪದವಿನಲ್ಲಿ ಆತಂಕ
ಮನೆಗೆ ತೆರಳಿದ ನಂತರ ಆತ ಕುಪ್ಪೆಪದವು ಪೇಟೆಯಲ್ಲಿ ಸುತ್ತಾಡಿದ್ದ ಹಾಗೂ ಅಂಗಡಿ, ಹೋಟೆಲ್ಗೂ ಭೇಟಿ ನೀಡಿದ್ದ, ಅಲ್ಲದೆ ಹಲವು ಕಡೆಗಳಿಗೆ ಔಷಧಿಗಾಗಿ ರಿಕ್ಷಾದಲ್ಲಿ ಸಂಚರಿಸಿದ್ದ ಎಂದು ಮಾಹಿತಿ ಲಭಿಸಿದೆ.
ಮನೆಗೆ ತೆರಳಿದ ನಂತರ ಆತ ಕುಪ್ಪೆಪದವು ಪೇಟೆಯಲ್ಲಿ ಸುತ್ತಾಡಿದ್ದ ಹಾಗೂ ಅಂಗಡಿ, ಹೋಟೆಲ್ಗೂ ಭೇಟಿ ನೀಡಿದ್ದ, ಅಲ್ಲದೆ ಹಲವು ಕಡೆಗಳಿಗೆ ಔಷಧಿಗಾಗಿ ರಿಕ್ಷಾದಲ್ಲಿ ಸಂಚರಿಸಿದ್ದ ಎಂದು ಮಾಹಿತಿ ಲಭಿಸಿದೆ.
ಮೃತ ಯುವಕ ಮತ್ತು ಮನೆಯವರು ಕುಪ್ಪೆಪದವು ಪೇಟೆಗೆ ಭೇಟಿ ನೀಡಿದ್ದು ಇದೀಗ ಆತಂಕಕ್ಕೆ ಕಾರಣವಾಗಿದೆ. ಹಲವಾರು ಸಂಬಂದಿಕರು ನೆರೆಹೊರೆಯವರು ಯುವಕನ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು ಎಂದು ತಿಳಿದು ಬಂದಿದೆ.
ಆರೋಗ್ಯ ಸಿಬಂದಿ, ಆಶಾಕಾರ್ಯಕರ್ತೆಯರು ಮೃತನ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸುವ ಕಾರ್ಯ ನಡೆಸುತ್ತಿದ್ದಾರೆ .