Wednesday, August 10, 2022

Latest Posts

ದಕ್ಷಿಣ ಕನ್ನಡದಲ್ಲಿ ಗಾಳಿ ಸಹಿತ ವ್ಯಾಪಕ ಮಳೆ: ಜನಜೀವನ ಅಸ್ತವ್ಯಸ್ತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಆರಂಭಗೊಂಡ ಗಾಳಿ ಸಹಿತ ಭಾರಿ ಮಳೆ ಭಾನುವಾರವೂ ಮುಂದುವರೆದಿದ್ದು, ಅಲ್ಲಲ್ಲಿ ಮನೆ, ರಸ್ತೆ ಕುಸಿತ, ವ್ಯಾಪಕ ಹಾನಿ ಉಂಟಾಗಿದೆ. ಭಾನುವಾರ ಬೆಳಗ್ಗೆ 8.30ಕ್ಕೆ ದೊರೆತ ಮಾಹಿತಿಯಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಾದ್ಯಂತ ಸರಾಸರಿ 149 ಮಿ. ಮೀ. ಮಳೆಯಾಗಿದೆ.
ಜಿಲ್ಲೆಯ ಅಲ್ಲಲ್ಲಿ ರಸ್ತೆಗೆ ಮಣ್ಣು, ಬಂಡೆ ಕಲ್ಲು ಕುಸಿದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಮನೆ, ತಡೆಗೋಡೆ ಕುಸಿತಯಿಂದ ಮಂಗಳೂರಿನಲ್ಲಿ ಇಬ್ಬರಿಗೆ ಗಾಯವಾಗಿದ್ದು, ಮಳೆ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೆ. 22ರಂದು ಬೆಳಗ್ಗೆ 8.30ರವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಮಳೆ ಇನ್ನಷ್ಟು ಹೆಚ್ಚಳಗೊಂಡರೆ ಹಾನಿ, ಸಂತ್ರಸ್ತರ ಸಂಖ್ಯೆ ಹೆಚ್ಚಲಿದೆ.
 ಒಂಭತ್ತು ಮನೆ ಸಂಪೂರ್ಣ ಹಾನಿ
ಜಿಲ್ಲೆಯ ವಿವಿಧ ಕಡೆ ಒಟ್ಟು ಒಂಭತ್ತು ಮನೆಗಳು ಸಂಪೂರ್ಣ ಹಾನಿಯಾಗಿದ್ದು, 16 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ,ಕುಮಾರಧಾರ, ನಂದಿನಿ, ಶಾಂಭವಿ, ಫಲ್ಗುಣಿ ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಗದ್ದೆ, ಕೃಷಿ ಭೂಮಿ ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದೆ.
 ಅಲ್ಲಲ್ಲಿ ಹಾನಿ
ಮಂಗಳೂರಿನ ಅಳಪೆ ಗ್ರಾಮದ ಸರಿಪಳ್ಳ ಎಂಬಲ್ಲಿ ಗೋಡೆ ಕುಸಿತದಿಂದ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕದ್ರಿಯಲ್ಲಿ ಗೋಡೆ ಜರಿದುಬಿದ್ದು ಎರಡು ಮನೆಗಳಿಗೆ ಹಾನಿಯಾಗಿದೆ. ಬಜ್ಪೆ ಸಮೀಪದ ಕೊಂಚಾರು ಸೇತುವೆ ಸಮೀಪದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಕುಳಾಯಿ ಬಳಿಯೂ ಧರೆ ಕುಸಿದು ಮನೆ ಜಖಂಗೊಂಡಿದೆ.
 ಸಂತ್ರಸ್ತರಿಗೆ ಕಾಳಜಿ ಕೇಂದ್ರ
ಮಳೆ ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಮಂಗಳೂರು ತಾಲೂಕಿನಲ್ಲಿ ಮೂರು ಕಾಳಜಿ ಕೇಂದ್ರ ತೆರೆಯಲಾಗಿದೆ. ಜಿಪಂ ಬೋರ್ಡ್ ಶಾಲೆ ಕಾಶಿಮಠದಲ್ಲಿ ಏಳು ಜನ, ಮುಲ್ಕಿಯ ಕಿಲೆಂಜಾರು ಗ್ರಾಮ ನಂದಗೋಕುಲ ಭವನದಲ್ಲಿ 15 ಮಂದಿ, ಬಪ್ಪನಾಡು ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ 12ಮಂದಿಗೆ ಆಶ್ರಯ ನೀಡಲಾಗಿದೆ. ಮಂಗಳೂರು ತಾಲೂಕು ಹೊರತುಪಡಿಸಿ ಜಿಲ್ಲೆಯ ಇನ್ನಿತರ ಯಾವುದೇ ತಾಲೂಕುಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss