ಮಂಗಳೂರು: ಕೊರೋನಾ ವಿಚಾರದಲ್ಲಿ ಯುಎಇ ಮತ್ತು ಮಹಾರಾಷ್ಟ್ರ ನಂಜು ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ ಮತ್ತೆ ಕಂಟಕವಾಗುತ್ತಿದೆ. ಇವೆರಡು ಮೂಲದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ೨೩ ಮಂದಿಗೆ ಕೊರೋನಾ ದೃಢಗೊಂಡಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ ದ್ವಿಶತಕ ದಾಟಿದೆ.
ಸೋಂಕು ದೃಢಗೊಂಡ ೨೩ ಮಂದಿಯ ಪೈಕಿ ೨೧ ಮಂದಿ ಯುಎಇನಿಂದ ಆಗಮಿಸಿದವರು. ಇಬ್ಬರು ಮಹಾರಾಷ್ಟ್ರದಿಂದ ಬಂದವರು. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೨೧೮ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಸೋಮವಾರ ಮೂರು ಪ್ರಕರಣ ವರದಿಯಾಗಿತ್ತು. ಮಂಗಳವಾರ ಮತ್ತೆ ಪಾಸಿಟಿವ್ ಪ್ರಕರಣ ಸಂಖ್ಯೆ ಎರಡಂಕಿ ದಾಟಿದೆ. ಜತೆಗೆ ದ್ವಿಶತಕದತ್ತ ತಲುಪುವ ಮೂಲಕ ಕೊರೋನಾ ವಿಷಯದಲ್ಲಿ ಜನರು ಇನ್ನೂ ಹೆಚ್ಚಿನ ಜಾಗೃತೆ ವಹಿಸಬೇಕು ಎಂಬುದನ್ನು ಶ್ರುತಪಡಿಸಿದೆ.