ಹೊಸ ದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳ 114 ಗ್ರಾಮ ಪಂಚಾಯತುಗಳಿಗೆ ಭಾನುವಾರ ಶಾಂತಿಯುತ ಮತದಾನ ನಡೆಯಿತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಪ್ರಾಥಮಿಕ ವರದಿಗಳನ್ನು ಆಧರಿಸಿ ಭಾನುವಾರ ಸರಾಸರಿ ಶೇ.78 ಮತದಾನವಾಗಿದೆ. ಸುಳ್ಯದಲ್ಲಿ ಶೇ.8054, ಕಡಬದಲ್ಲಿ ಶೇ.77.61, ಬೆಳ್ತಂಗಡಿಯಲ್ಲಿ ಶೇ.78.43 ಮತ್ತು ಪುತ್ತೂರು ತಾಲೂಕಿನಲ್ಲಿ ಶೇ.78 ಮತದಾನವಾಗಿದೆ.
ಭಾನುವಾರ ರಜಾ ದಿನವಾದ ಕಾರಣ ಬೆಳಿಗ್ಗೆ ಮತದಾನ ಮಂದಗತಿಯಲ್ಲಿ ಸಾಗಿತ್ತು. 9 ಗಂಟೆಯ ಬಳಿಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಪೂರ್ವಾಹ್ನ 9 ಗಂಟೆಯ ಸುಮಾರಿಗೆ ಶೇ.15ರಷ್ಟು ಮತ ಚಲಾವಣೆ ಆಗಿತ್ತು. ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಶೇ.54.64 ಮತದಾರರು ಮತ ಚಲಾಯಿಸಿದ್ದರು. ಸಂಜೆ ಮೂರು ಗಂಟೆಗೆ ನಾಲ್ಕು ತಾಲೂಕುಗಳಲ್ಲಿ ಪ್ರತಿಶತ 65.62 ಮತದಾರರು ಹಕ್ಕು ಚಲಾಯಿಸಿದರು.
ಭಾನುವಾರದ ಚುನಾವಣೆಗೆ 710 ಮತಗಟ್ಟೆಗಳನ್ನು ಸಿದ್ಧ ಪಡಿಸಲಾಗಿತ್ತು. ಕೊರೋನಾ ಕಾರಣ ಮತಗಟ್ಟೆಗಳಲ್ಲಿ ಸಾನಿಟೈಸರ್, ಥರ್ಮಾ ಮೀಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ ಮತದಾರರ ಅನುಕೂಲಕ್ಕಾಗಿ ಹೆಲ್ಪ್ ಡೆಸ್ಕ್ಗಳಿದ್ದವು. ಮುಕ್ತ, ನ್ಯಾಯ ಸಮ್ಮತ ಮತ್ತು ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಿತ್ತು. ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.