ಮಂಗಳೂರು: ಲಾಕ್ ಡೌನ್ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಬರೋಬ್ಬರಿ 238 ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಇದೇ ವೇಳೆ 6 ಮಂದಿ ಸಾವನ್ನಪ್ಪಿದ್ದಾರೆ.
ಮೃತಪಟ್ಟ ಆರು ಮಂದಿ ಕೂಡ ಕೊರೋನಾ ಸೇರಿದಂತೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದವರಾಗಿದ್ದರು. ಜು.14ರಂದು 44 ವರ್ಷದ ವ್ಯಕ್ತಿ, ಜು.15ರಂದು 62 ಮತ್ತು 68 ವರ್ಷದ ವೃದ್ಧರು, ಜು.16ರಂದು 47 ವರ್ಷದ ಮಹಿಳೆ, 66 ಮತ್ತು 76 ವರ್ಷದ ವೃದ್ಧರಿಬ್ಬರು ಮೃತಪಟ್ಟಿದ್ದಾರೆ. ದ.ಕ. ಜಿಲ್ಲಾಡಳಿತ ಗುರುವಾರ ಹೆಲ್ತ್ ಬುಲೆಟಿನ್ ಈ ಮಾಹಿತಿ ನೀಡಿದೆ.
ಗುರುವಾರ ಪತ್ತೆಯಾದ ಒಟ್ಟು 238 ಕೊರೋನಾ ಪಾಸಿಟಿವ್ ಪ್ರಕರಣಗಳ ಪೈಕಿ 23 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. ಸಾಮಾನ್ಯ ಶೀತಜ್ವರ ಲಕ್ಷಣವಿದ್ದ 106 ಪ್ರಕರಣ, ಉಸಿರಾಟ ಸಮಸ್ಯೆಯಿದ್ದ 17, ಅಂತರಾಷ್ಟ್ರೀಯ ಪ್ರಯಾಣ ಮಾಡಿದ 19 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 73 ಮಂದಿಯ ಸೋಂಕಿನ ಮೂಲ ನಿಗೂಢವಾಗಿದ್ದು, ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.