Sunday, August 14, 2022

Latest Posts

ದಕ್ಷಿಣ ಕನ್ನಡ ಜಿಲ್ಲೆಗೆ ಮುಕ್ತ ಪ್ರಯಾಣ ಆಗ್ರಹಿಸಿ ಮಂಜೇಶ್ವರ ಬಿಜೆಪಿ ಒಬಿಸಿ ಮೋರ್ಚಾದಿಂದ ಅಂಚೆ ಕಾರ್ಡ್ ಆಂದೋಲನ

ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಡಿಯುತ್ತಿರುವ ಕಾಸರಗೋಡು ಜಿಲ್ಲೆಯ ಉದ್ಯೋಗಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಬಿಜೆಪಿ ಒಬಿಸಿ ಮೋರ್ಚಾದ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ಅಂಚೆ ಕಾರ್ಡ್ ಚಳುವಳಿಯ ಮೂಲಕ ಕೇರಳ ಸರಕಾರ ಹಾಗೂ ಕಾಸರಗೋಡು ಜಿಲ್ಲಾಡಳಿತದ ಗಮನ ಸೆಳೆಯಲಾಯಿತು. ತಲಪ್ಪಾಡಿ ಗಡಿ ಮೂಲಕ ಸಂಚಾರವನ್ನು ಯಾವುದೇ ಷರತ್ತು, ನಿಬಂಧನೆ ಇಲ್ಲದೆ ಮುಕ್ತಗೊಳಿಸಬೇಕು ಎಂದು ಬಿಜೆಪಿ ಓಬಿಸಿ ಮೋರ್ಚಾದ ಮಂಡಲ ಘಟಕವು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹಾಗೂ ಕೇರಳ ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ಅವರಿಗೆ ಅಸಂಖ್ಯಾತ ಪೋಸ್ಟ್ ಕಾರ್ಡ್ ಕಳುಹಿಸುವ ಮೂಲಕ ಒತ್ತಾಯಿಸಿದೆ.
ಮಂಜೇಶ್ವರ ಹೊಸಂಗಡಿಯ ಅಂಚೆ ಕಚೇರಿ ಮುಂಭಾಗದಲ್ಲಿ ಗುರುವಾರ ನಡೆದ ಈ ಅಂಚೆ ಕಾರ್ಡ್ ರವಾನೆಯ ವಿಶಿಷ್ಟ ಚಳುವಳಿಯನ್ನು ಓಬಿಸಿ ಮೋರ್ಚಾದ ರಾಜ್ಯ ಕೋಶಾಧಿಕಾರಿ, ನ್ಯಾಯವಾದಿ ನವೀನ್ ರಾಜ್ ಕೆ.ಜೆ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾದ ಮಂಜೇಶ್ವರ ಪಂಚಾಯತ್ ಸಮಿತಿಯ ಅಧ್ಯಕ್ಷ ಸತ್ಯದಾಸ್, ಕಾರ್ಯದರ್ಶಿ ದಯಾಪ್ರಸನ್ನ ಆಚಾರ್ಯ, ಸದಸ್ಯರಾದ ದೇವರಾಜ್ ಎಂ.ಎಸ್., ಮನಮೋಹನ್ ಮುಂತಾದವರು ಪಾಲ್ಗೊಂಡಿದ್ದರು. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉದ್ಯೋಗದಲ್ಲಿದ್ದು , ದಿನಂಪ್ರತಿ ಹೋಗಿ ಬರುವ ಕಾಸರಗೋಡಿನ ಜನರ ಬಗ್ಗೆ ಕೇರಳ ಸರಕಾರವು ತೀರಾ ನಿರ್ಲಕ್ಷ್ಯ ಧೋರಣೆ ತಳೆದಿದೆ. ಈ ಅವಗಣನೆಯ ವಿಚಾರದಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಒಬಿಸಿ ಮೋರ್ಚಾದ ನೇತೃತ್ವದಲ್ಲಿ ಮುಂದೆ ಪ್ರತ್ಯಕ್ಷವಾದ ಪ್ರಬಲ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಒಬಿಸಿ ಮೋರ್ಚಾದ ಮಂಜೇಶ್ವರ ಮಂಡಲ ಸಮಿತಿಯು ಎಚ್ಚರಿಕೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss