ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆ, ಗುಣಮುಖಗೊಂಡು ಬಿಡುಗಡೆಗೊಳ್ಳುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಕೊರೋನಾ ಪಾಸಿಟಿವ್ ಕಾಣಿಸಿಕೊಂಡು ವೆನ್ಲಾಕ್ನಲ್ಲಿ ಚಿಕಿತ್ಸೆ ಪಡೆದ ಆರು ಮಂದಿ ಗುಣಮುಖಗೊಂಡು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 70 ವರ್ಷದ ಗಂಡಸು ರೋಗಿ ಸಂಖ್ಯೆ 6272 ಮಧುಮೇಹ, ನ್ಯೂಮೋನಿಯಾದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 52 ವರ್ಷದ ಗಂಡಸು ರೋಗಿ ಸಂಖ್ಯೆ 6283 ಮಧುಮೇಹ ಮತ್ತು ಅರ್ಬುದ ರೋಗದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
225 ಸಕ್ರಿಯ ಪ್ರಕರಣ
ಜಿಲ್ಲೆಯಲ್ಲಿ ಗುರುವಾರ 259 ಮಂದಿಯ ವರದಿ ಸ್ವೀಕೃತವಾಗಿದ್ದು, 23ಪಾಸಿಟಿವ್, 235 ನೆಗೆಟಿವ್ ಆಗಿದೆ. 56 ಮಂದಿಯ ವರದಿ ನಿರೀಕ್ಷಿಸಲಾಗಿದೆ. 140ಮಂದಿಯನ್ನು ಹೊಸದಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ತೀವ್ರ ಉಸಿರಾಟ ತೊಂದರೆಯ 28 ಪ್ರಕರಣ ವರದಿಯಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 409 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಪೈಕಿ 225ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8 ಮಂದಿ ಮೃತಪಟ್ಟಿದ್ದಾರೆ. 176 ಮಂದಿ ಗುಣಮುಖರಾಗಿದ್ದಾರೆ.