ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 4 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ 426 ಪ್ರಕರಣಗಳು ದಾಖಲಾದಂತಾಗಿದೆ.
ಸೌದಿ ಅರೇಬಿಯಾದಿಂದ ಬಂದ 30 ವರ್ಷದ ವ್ಯಕ್ತಿ, ಕುವೈಟ್ನಿಂದ ಬಂದ 57 ವರ್ಷದ ವ್ಯಕ್ತಿ, ಮಹಾರಾಷ್ಟ್ರದಿಂದ ಬಂದ 21ರ ಹರೆಯದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ರೋಗಿ ಸಂಖ್ಯೆ 8005 ರ 22 ವರ್ಷದ ಯುವಕನಿಂದ 20 ವರ್ಷದ ಯುವಕನೊಬ್ಬನಿಗೆ ಸೋಂಕು ತಗುಲಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಯಾದ ವೆನ್ಲಾಕ್ಗೆ ದಾಖಲಿಸಲಾಗಿದೆ.
ದುಬೈ, ಮಹಾರಾಷ್ಟ್ರ, ಸೌದಿ ಅರೇಬಿಯಾ, ಕುವೈಟ್ ಮುಂತಾದ ಕಡೆಯಿಂದ ಬಂದವರಿಂದಲೇ ಹೆಚ್ಚಾಗಿ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 426 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಕೊರೋನಾ ಸೋಂಕು ಕಂಡು ಬಂದು ಕೋವಿಡ್ ಆಸ್ಪತ್ರೆಯಲ್ಲಿದ್ದ ನಾಲ್ಕು ಮಂದಿ ಗುಣಮುಖರಾಗಿ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಒಟ್ಟು 210 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಂತಾಗಿದೆ. 8 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 208 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.