ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಅಪಾಯಕಾರಿ ಸ್ಥಿತಿಯತ್ತ ಹೊರಳುತ್ತಿರುವ ಲಕ್ಷಣ ಗೋಚರವಾಗಿದ್ದು, ಶನಿವಾರ ಬರೋಬ್ಬರಿ 49 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಮೂಲ ಪತ್ತೆಯಾಗದೇ ಸೋಂಕು ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ಗಂಭೀರಗೊಳ್ಳುವ ಸಾಧ್ಯತೆ ಇದೆ. ಶನಿವಾರದ ಪ್ರಕರಣಗಳ ಪೈಕಿ ವಿದೇಶದಿಂದ ಬಂದವರು 14 ಮಂದಿ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 22 ಮಂದಿಗೆ ಕೊರೋನಾ ಹರಡಿದೆ. ತೀವ್ರ ಉಸಿರಾಟ ಸಮಸ್ಯೆಯ ನಾಲ್ಕು ಮಂದಿಗೆ ಕೊರೋನಾ ಕಾಣಿಸಿಕೊಂಡಿದೆ. ಶೀತ ಜ್ವರದ ಲಕ್ಷಣವುಳ್ಳ 3 ಮಂದಿ ಪರೀಕ್ಷೆಗೆ ಒಳಗಾದಾಗ ಕೊರೋನಾ ಪತ್ತೆಯಾಗಿದೆ. ಆರು ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 576ಕ್ಕೆ ಏರಿಕೆಯಾಗಿದೆ.
ಪುತ್ತೂರಿನ 40 ವರ್ಷದ ಮಹಿಳೆ, ಮಂಗಳೂರಿನ 22 ವರ್ಷದ ಯುವತಿ, ಪುತ್ತೂರಿನ 19 ವರ್ಷದ ಯುವಕನಿಗೆ ಶೀತಜ್ವರದ ಲಕ್ಷಣವಿದ್ದು, ಪಾಸಿಟಿವ್ ದೃಢಪಟ್ಟಿದೆ. ಮಂಗಳೂರಿನ 35 ವರ್ಷದ ಗಂಡಸು, ಬಂಟ್ವಾಳದ 48 ವರ್ಷದ ಹೆಂಗಸು ಮತ್ತು 76 ವರ್ಷದ ಗಂಡಸು, ಪುತ್ತೂರಿನ 80 ವರ್ಷದ ವೃದ್ದೆಗೆ ತೀವ್ರ ಉಸಿರಾಟ ಸಮಸ್ಯೆಯೊಂದಿಗೆ ಸೋಂಕು ಕಾಣಿಸಿಕೊಂಡಿದೆ. ರೋಗಿ ಸಂಖ್ಯೆ 9590 ರ ಪ್ರಾಥಮಿಕ ಸಂಪರ್ಕದಿಂದ 17 ಮಂದಿಗೆ ಕೊರೋನಾ ಅಂಟಿದೆ.