ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಂಗಳವಾರ (ಜು.28) 41 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಕೋವಿಡ್ ಮತ್ತು ಖಾಸಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದವರ ಸಂಖ್ಯೆ 2338 ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಜಿಲ್ಲೆಯ 173 ಮಂದಿಗೆ ಕೋವಿಡ್ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಪಾಸಿಟಿವ್ ಇರುವ ರೋಗಿಗಳನ್ನು ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್ ಮತ್ತು ಹೋಂ ಐಸೋಲೇಶನ್ಗೆ ಒಳಪಡಿಸಲಾಗಿದೆ. 2632 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಂಗಳವಾರ ಸೋಂಕು ಪತ್ತೆಯಾದ ಒಟ್ಟು 173 ಪ್ರಕರಣಗಳಲ್ಲಿ 21 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಕೋವಿಡ್ ಬಂದಿದೆ. ಸಾಮಾನ್ಯ ಜ್ವರ ಪ್ರಕರಣಗಳು 91 ಮತ್ತು ತೀವ್ರ ಉಸಿರಾಡದ ತೊಂದರೆಯಿಂದ ಪಾಸಿಟಿವ್ ಬಂದವರು 22. ಸೋಂಕಿನ ಮೂಲ ಪತ್ತೆಯಾಗದ 38 ಪ್ರಕರಣಗಳಿದ್ದು, ಮೂಲ ಪತ್ತೆಗಾಗಿ ಪ್ರಯತ್ನಿಸಲಾಗುತ್ತಿದೆ. ಪ್ರವಾಸದ ಹಿನ್ನೆಲೆಯಿಂದ ಒಬ್ಬರಿಗೆ ಕೊರೋನಾ ಸೋಂಕು ತಗುಲಿದೆ.
ಮಂಗಳವಾರ ನಾಲ್ಕು ಮಂದಿ ಮೃತ ಪಟ್ಟಿದ್ದಾರೆ. ಮೃತ ಪಟ್ಟವರಲ್ಲಿ ಇಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನವರು. ಒಬ್ಬರು 62 ವರ್ಷದ ಪುರುಷ ಮತ್ತು ಇನ್ನೊಬ್ಬರು 25 ವರ್ಷದ ಮಹಿಳೆಯಾಗಿದ್ದಾರೆ.
ಇನ್ನಿಬ್ಬರ ಪೈಕಿ ಒಬ್ಬರು 84 ವರ್ಷದ ಪುರುಷ, ಹಾಸನ ಜಿಲ್ಲೆಯ ಸಕಲೇಶಪುರದವರು. ಮತ್ತೊಬ್ಬರು ಭಟ್ಕಳದ 72 ವರ್ಷದ ಪುರುಷರಾಗಿದ್ದಾರೆ.
ಪ್ರಸ್ತುತ ಕೋವಿಡ್ ಮತ್ತು ಇತರ ಖಾಸಗಿ ಆಸ್ಪತ್ರೆಗಳಲ್ಲಿ 2632 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ತನಕ 35,081 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. 5103 ಮಂದಿಗೆ ಸೋಂಕು ಇರುವುದು ದೃಢ ಪಟ್ಟಿದೆ. 29,978 ಮಂದಿಯ ವರದಿ ನೆಗೆಟಿವ್ ಬಂದಿರುತ್ತದೆ ಎಂದು ಜಿಲ್ಲಾಡಳಿತದ ವರದಿ ತಿಳಿಸಿದೆ.