ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಒಟ್ಟು 198 ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ 105 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೋನಾ ಸೋಂಕು ಹಾಗೂ ವಿವಿಧ ರೋಗದಿಂದ ಬಳಲುತ್ತಿದ್ದ ದ.ಕ. ಜಿಲ್ಲೆಯ ಪುತ್ತೂರಿನ 36 ವರ್ಷದ ಮಹಿಳೆ, ಮಂಗಳೂರಿನ 60 ವರ್ಷದ ಮಹಿಳೆ, ದಾವಣಗೆರೆಯ 60 ವರ್ಷದ ಮಹಿಳೆ, ಮಂಗಳೂರಿನ 57 ವರ್ಷ ಮತ್ತು 52 ವರ್ಷದ ವ್ಯಕ್ತಿಗಳು, ಮೈಸೂರಿನ 75 ವರ್ಷದ ವೃದ್ಧ, ಪುತ್ತೂರಿನ 64 ವರ್ಷದ ವೃದ್ಧ, ಮಂಗಳೂರಿನ 87ವರ್ಷದ ವೃದ್ಧೆ ಸಾವನ್ನಪ್ಪಿದವರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 150 ಮಂದಿ ಸಾವನ್ನಪ್ಪಿದ್ದಾರೆ.
ಗುರುವಾರ ಪತ್ತೆಯಾದ 198 ಪಾಸಿಟಿವ್ ಪ್ರಕರಣಗಳಲ್ಲಿ 27 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. ಸಾಮಾನ್ಯ ಶೀತಜ್ವರ ಪ್ರಕರಣ 80, ಉಸಿರಾಟ ಸಮಸ್ಯೆಯ 14 ಪ್ರಕರಣ ಮತ್ತು ಅಂತಾರಾಷ್ಟ್ರೀಯ ಪ್ರಯಾಣ ಮಾಡಿದ 4 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. 73ಮಂದಿಯ ಸೋಂಕಿನ ಮೂಲ ನಿಗೂಢವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5509 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 2561 ಮಂದಿ ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದಾರೆ. ಸದ್ಯ 2800 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.