ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಸೋಮವಾರ ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್, ಬಳಿಕ ಮಂಗಳವಾರ ಬೆಳಗ್ಗೆ 8.30ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ನೇತ್ರಾವತಿ, ಕುಮಾರಧಾರಾ ನದಿಗಳು ಭಾನುವಾರವೂ ಉಕ್ಕಿ ಹರಿಯುತ್ತಿವೆ. ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ, ಸುಬ್ರಹ್ಮಣ್ಯ ಪರಿಸರದಲ್ಲಿ ಪ್ರವಾಹ ಭೀತಿ ಯಥಾಸ್ಥಿತಿಯಲ್ಲಿದೆ. ಸೋಮವಾರವೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಮಂಗಳೂರಿನಲ್ಲಿ ಭಾನುವಾರ ಇಡೀ ದಿನ ಮೋಡ ಮುಸುಕಿದ ವಾತಾವರಣದೊಂದಿಗೆ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ತಾಪಮಾನದಲ್ಲಿ ಇಳಿಕೆ ಕಂಡುಬಂದಿದ್ದು, ಚಳಿಯ ವಾತಾವರಣ ಸೃಷ್ಟಿಯಾಗಿದೆ. ಬಿಟ್ಟು ಬಿಟ್ಟು ಮಳೆಯಾಗುತ್ತಿರುವ ಕಾರಣ ಈ ಬಾರಿ ಇದುವರೆಗೆ ನಗರದಲ್ಲಿ ಕೃತಕ ನೆರೆಯ ಆತಂಕ ಕಾಡಿಲ್ಲ.
ನಗರದಲ್ಲಿ ಭಾನುವಾರ ಗರಿಷ್ಠ 26.0 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಆ. 10ರಂದು ಮೋಡ ಕವಿದ ವಾತಾವರಣದೊಂದಿಗೆ ಭಾರಿ ಮಳೆಯಾಗಲಿದೆ. ಮುಂದಿನ 48 ಗಂಟೆ ಅವಧಿಯಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳ ಅಲ್ಲಲ್ಲಿ ಭಾರಿಯಿಂದ ಅತಿಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.