ಮಂಗಳೂರು: ಕೆ.ಎಸ್.ಆರ್.ಟಿ.ಸಿ ನರ್ಮ್ ಬಸ್ಗಳ ಸಂಚಾರವನ್ನು ಮಂಗಳೂರು ನಗರದಲ್ಲಿ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಕೆಎಸ್ಆರ್ಟಿಸಿ ನರ್ಮ್ ಬಸ್ಗಳ ಬಗ್ಗೆ ಮಾಹಿತಿ ಪಡೆದು 42 ನರ್ಮ್ ಬಸ್ಗಳು ಕಾರ್ಯಾಚರಣೆ ಪ್ರಾರಂಭಿಸಲಿ. ಎಲ್ಲಿ ಅಗತ್ಯವಿದೆಯೋ ಅಲ್ಲಿ ಮೊದಲು ಒಂದೊಂದಾಗಿ ಕಾರ್ಯಾಚರಿಸಲಿ ಎಂದು ಸೂಚಿಸಿದರು.
ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ
ಕೆಎಸ್ಆರ್ಟಿಸಿ ಅಧಿಕಾರಿ ಮಾತನಾಡಿ, ಮಂಗಳವಾರ 40 ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ಆರಂಭಿಸಿವೆ. ಎಲ್ಲ ಬಸ್ಗಳಲ್ಲಿ ಪ್ರಯಾಣಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಲು ಸೂಚಿಸಲಾಗಿದೆ. ಸ್ಯಾನಿಟೈಸರ್ ಬಸ್ ನಿರ್ವಾಹಕರ ಕೈಯಲ್ಲಿ ನೀಡಲಾಗಿದ್ದು ಪ್ರಯಾಣಿಕರು ಬಸ್ನೊಳಗೆ ಪ್ರವೇಶಿಸುವ ಮೊದಲು ಸ್ಯಾನಿಟೈಸರ್ ಬಳಸುವಂತೆ ಕ್ರಮ ವಹಿಸಲಾಗಿದೆ. ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಮಂಗಳೂರಿನಿಂದ ಬೆಂಗಳೂರು ಅಥವಾ ಮೈಸೂರು ಬಸ್ಗಳಲ್ಲಿ ಪ್ರಯಾಣಿಸುವವರಿಗೆ ಟರ್ಮಿನಲ್ ಸ್ಕ್ಯಾನಿಂಗ್, ಮಾಸ್ಕ್, ಸ್ಯಾನಿಟೈಸರ್ ಮತ್ತು ಪ್ರಯಾಣಿಸುವವರ ಬಗ್ಗೆ ಮಾಹಿತಿ ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನೀಡಬೇಕು. ಕರ್ನಾಟಕ ಸಾರಿಗೆ ಬಸ್ನಲ್ಲಿ 29 ಮಂದಿ, ರಾಜಹಂಸ ಬಸ್ನಲ್ಲಿ ೧೯ ಜನ ಪ್ರಯಾಣಿಸಬಹುದು ಎಂದರು.