ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರವೂ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ.
ಜಿಲ್ಲೆಯಲ್ಲಿ 24 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗುವ ಜತೆಗೆ ಮೂವರು ಮಹಿಳೆಯರು ಬಲಿಯಾಗುವ ಮೂಲಕ ಕೋವಿಡ್ -19 ಜನತೆಯಲ್ಲಿ ಭಾರಿ ಆತಂಕ ಸೃಷ್ಟಿಸಿತ್ತು. 12 ಮಂದಿ ಸೋಂಕಿತರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಬಂಟ್ವಾಳದ ಕಸಬಾ ಮತ್ತು ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆ ಮೂಲದಿಂದ ಸರಣಿಯಾಗಿ 10 ಪ್ರಕರಣ ಪತ್ತೆಯಾದುದು ಮತ್ತು ಇವೆರಡು ಮೂಲಕ್ಕೆ ಸೋಂಕು ಎಲ್ಲಿಂದ ಬಂತು ಎಂಬುದು ಇನ್ನೂ ಗೊತ್ತಾಗದೇ ಇರುವುದು ಜನರಿಗೆ ಭೀತಿ ಮೂಡಿಸಿತ್ತು.
ಈ ವಿಚಾರ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೂ ಸವಾಲಾಗಿಯೇ ಇದೆ. ಈ ನಡುವೆ ಕಳೆದ ಎರಡು ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗದೇ ಇರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಜಿಲ್ಲೆಯಲ್ಲಿ ಸೋಮವಾರದಿಂದ ಮೂರನೇ ಹಂತದ ಲಾಕ್ ಡೌನ್ ಜಾರಿಗೊಳ್ಳುತ್ತಿದೆ. ಈ ಭಾರಿ ಲಾಕ್ ಡೌನ್ ನಲ್ಲಿ ಜಿಲ್ಲಾಡಳಿತ ಭಾರಿ ಸಡಿಲಿಕೆ ಮಾಡಿರುವುದು ಆರ್ಥಿಕ ದೃಷ್ಟಿಯಿಂದ ಉತ್ತಮ ನಿರ್ಧಾರ ಎನಿಸಿದರೂ, ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ನಿಯಮ ಕಠಿಣವಾಗಿ ಮುಂದುವರೆಯಬೇಕಿತ್ತು, ಮದ್ಯ ಮಾರಾಟಕ್ಕೆ ಅವಕಾಶ ಬೇಡವಾಗಿತ್ತು ಎಂಬುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
114 ವರದಿ ನೆಗೆಟಿವ್: ಕೊರೋನಾ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಭಾನುವಾರ ದೊರೆತ 114 ಮಂದಿಯ ಪರೀಕ್ಷಾ ವರದಿಯಲ್ಲಿ ಎಲ್ಲವೂ ನೆಗೆಟಿವ್ ಆಗಿದೆ. 377 ಮಂದಿಯ ವರದಿ ನಿರೀಕ್ಷಿಸಲಾಗಿದೆ. 95 ಮಂದಿಯನ್ನು ಹೊಸದಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
ಭಾನುವಾರ 70 ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಇದುವರೆಗೆ ಒಟ್ಟು 40157 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಸುರತ್ಕಲ್ ಎನ್.ಐ.ಟಿ.ಕೆಯಲ್ಲಿ 68 ಮಂದಿ ಕ್ವಾರಂಟೈನ್ ನಲ್ಲಿದ್ದು, ಈ ಪೈಕಿ ಎಂಟು ಮಂದಿ ಹೊಸದಾಗಿ ಸೇರ್ಪಡೆಯಾದವರು. ಮಂಗಳೂರಿನ ಇ.ಎಸ್.ಐ ಆಸ್ಪತ್ರೆಯಲ್ಲಿ 40 ಮಂದಿ ಕ್ವಾರಂಟೈನ್ ನಲ್ಲಿ ಇದ್ದಾರೆ. 6073 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಇದುವರೆಗೆ 3278 ಮಂದಿಯ ಪರೀಕ್ಷಾ ವರದಿ ಸ್ವೀಕೃತವಾಗಿದೆ. ಈ ಪೈಕಿ 24 ಪಾಸಿಟಿವ್, 3254 ನೆಗೆಟಿವ್, ಮೂರು ಮೃತ, 9 ಅ್ಯಕ್ಟಿವ್ ಪ್ರಕರಗಳಾಗಿವೆ ಎಂದು ಡಿಸಿ ವಿವರಿಸಿದ್ದಾರೆ.