ಗೋಣಿಕೊಪ್ಪ: ದಕ್ಷಿಣ ಕೊಡಗಿನಲ್ಲಿ ನಿರಂತರ ಹುಲಿ ದಾಳಿ ನಡೆಯುತ್ತಿರುವ ಮುಗುಟಗೇರಿ ಹಾಗೂ ನಡಿಕೇರಿ ಗ್ರಾಮದಲ್ಲಿ ಹುಲಿ ಹಿಡಿಯುವ ಕಾರ್ಯಾಚರಣೆ ಎರಡನೇ ದಿನಕ್ಕೆ ಮುಂದುವರಿದಿದೆ.
ಮತ್ತಿಗೋಡು ಸಾಕಾನೆ ಕೇಂದ್ರದ ಗಣೇಶ, ಭೀಮ, ಅಭಿಮನ್ಯು, ಕೃಷ್ಣ ಮತ್ತು ಗೋಪಾಲಸ್ವಾಮಿ ಆನೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
ಎರಡು ದಿನಗಳ ಹಿಂದೆ ಹಸುವನ್ನು ಬಲಿ ಪಡೆದಿದ್ದ ನಡಿಕೇರಿ ಗ್ರಾಮದ ಮುದ್ದಿಯಡ ಜಯ ಎಂಬವರ ಸ್ಥಳದಲ್ಲಿ ಬೋನು ಇರಿಸಲಾಗಿದ್ದು, ಹುಲಿಯ ರಾತ್ರಿ ವೇಳೆಯ ಚಲನವಲನವನ್ನು ತಿಳಿಯಲು ಸಿಸಿಟಿವಿ ಅಳವಡಿಸಲಾಗಿದೆ.
ಹುಲಿ ಸೆರೆಹಿಡಿಯುವ ನೇತೃತ್ವವನ್ನು ಎಸಿಎಫ್ ಶ್ರೀಪತಿ ರಾವ್ ವಹಿಸಿದ್ದು ಹುಣಸೂರು ವನ್ಯಜೀವಿ ವಿಭಾಗದ ಪಶುವೈದ್ಯಾಧಿಕಾರಿ ಡಾ. ಮುಜೀಬ್, ಅರವಳಿಕೆಯ ನುರಿತ ಗುರಿಕಾರ ರಂಜನ್, ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ತೀರ್ಥ, ತಿತಿಮತಿ ವಲಯ ಅರಣ್ಯ ಅಧಿಕಾರಿ ಶ್ರೀನಿವಾಸ್ ಹಾಗೂ ಇಲಾಖೆಯ ೪೦ ಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.