ಹೊಸ ದಿಗಂತ ವರದಿ, ಪೊನ್ನಂಪೇಟೆ:
ದಕ್ಷಿಣ ಕೊಡಗಿನ ಪೊರಾಡು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಹಾಡಹಗಲೇ ಕಾಣಿಸಿಕೊಂಡಿದ್ದ ಹುಲಿ, ಗುರುವಾರ ರಾತ್ರಿ
ಗಬ್ಬದ ಹಸುವನ್ನು ಬೇಟೆಯಾಡಿದೆ.
ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದ ಮಲ್ಲೇಂಗಡ ಪಿ.ಧನಂಜಯ ಅವರ ಗಬ್ಬದ ಹಸುವನ್ನು ಕೊಟ್ಟಿಗೆಯಿಂದ ಸುಮಾರು 50 ಅಡಿಗಳಷ್ಟು ದೂರು ಎಳೆದೊಯ್ದು ಕೊಂದು ಹಾಕಿದೆ.
ಬಾಲಕ ಅಪಾಯದಿಂದ ಪಾರಾಗಿದ್ದರು
ಪೊರಾಡು ಗ್ರಾಮದಲ್ಲಿ ಫೆ.2ರ ಹಾಡ ಹಗಲೇ ಬೆಳೆಗಾರ ಬಲ್ಯಮೀದೇರಿರ ವಿಜಯಪ್ರಸಾದ್ ಅವರ ತೋಟದಲ್ಲಿ ಹುಲಿ ಕಾಣಿಸಿಕೊಂಡಿತ್ತು. ತೋಟ ಕೆಲಸ ನಿಮಿತ್ತ ತೋಟಕ್ಕೆ ತೆರಳಿದ್ದ ವಿಜಯಪ್ರಸಾದ್ ಅವರ ಪುತ್ರ 14 ವರ್ಷದ ಪ್ರತೀಕ್ ಪೊನ್ನಣ್ಣ ಅವರು 5 ಅಡಿ ಅಂತರದಲ್ಲಿ ಹುಲಿಯನ್ನು ಎದುರಾಗಿದ್ದರು. ಹುಲಿ ಮಲಗಿದ ಸ್ಥಿತಿಯಲ್ಲಿದ್ದುದ್ದರಿಂದ ಹುಲಿಗೆ ಬಾಲಕ ಕಾಣಿಸದೆ ಅಪಾಯದಿಂದ ಪಾರಾಗಿದ್ದರು.
ಇದೀಗ ಹುಲಿ ಪ್ರತ್ಯೇಕ್ಷವಾದ ಸ್ಥಳದಿಂದ ಸುಮಾರು 2 ಕಿ.ಮೀ ದೂರದಲ್ಲಿ ಹಸು ಮೇಲೆ ಹುಲಿ ದಾಳಿ ಮಾಡಿದ ಘಟನೆ ನಡೆದಿದೆ.
ಸ್ಥಳಕ್ಕೆ ಪೊನ್ನಂಪೇಟೆ ಆರ್.ಎಫ್.ಓ ರಾಜಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳು ತೆರಳಿ ಸ್ಥಳ ಪರಿಶೀಲನೆ ಮಾಡಿ ಪರಿಹಾರ ನೀಡುವುದರೊಂದಿಗೆ ಹುಲಿಯನ್ನು ಗ್ರಾಮದಿಂದ ಅರಣ್ಯಕ್ಕಟ್ಟುವ ಭರವಸೆ ನೀಡಿದ್ದಾರೆ.
ಪರಿಹಾರ ನೀಡುವಂತೆ ಒತ್ತಾಯ
ಸ್ಥಳಕ್ಕೆ ರೈತ ಸಂಘದ ಮುಖಂಡರಾದ ಮಲ್ಲೇಂಗಡ ಶಶಿ, ಮಲ್ಲೇಂಗಡ ಸನ್ನಿ, ಕಾಯಪಂಡ ಮಧು ಮೋಟಯ್ಯ, ಬಲ್ಯಮೀದೇರಿರ ಸಂಪತ್, ಮೀದೇರಿರ ಕುಟ್ಟಪ್ಪ, ಅಣ್ಣೀರ ವಿಜು ಪೂಣಚ್ಚ ತೆರಳಿ ಸಂತಸ್ತ ರೈತನಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿ ಇಂದು, ನಿನ್ನೆಯದಲ್ಲ. ಕಳೆದ ಒಂದೆರಡು ದಶಕದಿಂದ ಹಾವಳಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಸುಮಾರು 282 ಕಿ.ಮೀ ಗ್ರಾಮ ಹಾಗೂ ಅರಣ್ಯದ ಸರಹದ್ದು ಇದೆ. ಅರಣ್ಯದಿಂದ ವನ್ಯಪ್ರಾಣಿಗಳು ಗ್ರಾಮಕ್ಕೆ ನುಸುಳುವುದನ್ನು ತಡೆಯಲು ಈ ಸರಹದ್ದುವಿನಲ್ಲಿ ಸೂಕ್ತ ಗೋಡೆ ಮತ್ತು ಬೇಲಿಯನ್ನು ನಿರ್ಮಿಸಬೇಕಾಗಿದೆ. ಪಂಚವಾರ್ಷಿಕ ಯೋಜನೆ ರೂಪಿಸಿ ಪ್ರತಿ ವರ್ಷ 60 ಕಿ.ಮೀ.ನಷ್ಟು ತಡೆಗೋಡೆಯನ್ನು ನಿರ್ಮಿಸಿದರೆ ವನ್ಯಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟ, ಜನ ಮತ್ತು ಜಾನುವಾರುಗಳ ಜೀವ ಹಾನಿಗಳನ್ನು ಶಾಶ್ವತವಾಗಿ ತಪ್ಪಿಸಬಹುದು. ಇದಲ್ಲದೇ ಕಾಡಾನೆ ಕಾರಿಡಾರ್ಗಳು ಮುಚ್ಚಲ್ಪಟ್ಟಿದ್ದು, ಅವುಗಳನ್ನು ತೆರವುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡಗು ಬೆಳೆಗಾರರ ಒಕ್ಕೂಟದಿಂದ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಲಿಖಿತ ಮನವಿ ಪತ್ರ ಸಲ್ಲಿಸಿದ್ದು, ಅವರು ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಪ್ರಸಕ್ತ ಬಜೆಟ್ನಲ್ಲಿ ವನ್ಯ ಪ್ರಾಣಿಗಳ ಹಾವಳಿ ತಡೆಗಟ್ಟಲು ಸೂಕ್ತ ಯೋಜನೆ ರೂಪಿಸುವ ಭರವಸೆ ಇದೆ ಎಂದು ಕೊಡಗು ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಈ ಸಂದರ್ಭ ತಿಳಿಸಿದರು.