Wednesday, June 29, 2022

Latest Posts

ದತ್ತಜಯಂತಿ ಕಾರ್ಯಕ್ರಮಕ್ಕೆ ಸಜ್ಜಾದ ವಿಶ್ವಹಿಂದೂ ಪರಿಷತ್, ಬಜರಂಗದಳ

 ಹೊಸ ದಿಗಂತ ವರದಿ, ಚಿಕ್ಕಮಗಳೂರು:

ವಿಶ್ವಹಿಂದೂ ಪರಿಷತ್, ಬಜರಂಗದಳ ವತಿಯಿಂದ ಈ ಬಾರಿ ನಡೆಯುವ ದತ್ತಜಯಂತಿ ಕಾರ್ಯಕ್ರಮಗಳಿಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಜರಂಗದಳ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕೋವಿಡ್-19 ನಿಯಮಗಳನ್ನು ಪಾಲಿಸಿಯೇ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಕೊರೋನಾ ಮುಕ್ತಿಗೆ ಹೋಮ
ಈ ಬಾರಿ ವಿಶೇಷವಾಗಿ ದತ್ತಪೀಠದಲ್ಲಿ ಕರೋನಾ ಮುಕ್ತಿಗಾಗಿ ಧನ್ವಂತರಿ ಹೋಮ ನಡೆಸಲಾಗುವುದು ಹಾಗೂ ಅನುಸೂಯಾದೇವಿ ಪೂಜೆ ಮತ್ತು ಸಂಕೀರ್ತನಾ ಯಾತ್ರೆಗೆ ಕಲೆ, ಸಾಹಿತ್ಯ, ಕ್ರೀಡೆ ಇನ್ನಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಆಹ್ವಾನಿಸಲಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕಡೂರಿನ ವೇದಾ ಕೃಷ್ಣಮೂರ್ತಿ ಸೇರಿದಂತೆ ಹುಬ್ಬಳ್ಳಿ, ಶಿವಮೊಗ್ಗ ಇನ್ನಿತರೆ ಕಡೆಗಳಿಂದ ವಿವಿಧ ಕ್ಷೇತ್ರದ ಸಾಧಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಅನಸೂಯ ಪೂಜೆ
ಡಿ.27 ರಿಂದ 29 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಿ.27 ರಂದು ಅನುಸೂಯಾ ಪೂಜೆ ಅಂಗವಾಗಿ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಕಾಮಧೇನು ಗಣಪತಿ ದೇವಸ್ಥಾನದ ವರೆಗೆ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ. ನಂತರ ದತ್ತಪೀಠಕ್ಕೆ ತೆರಳಿ ಪಾದುಕೆಗಳ ದರ್ಶನ ಪಡೆಯಲಿದ್ದಾರೆ. ಪೀಠದಲ್ಲಿ ಹಿಂದೂ ಸಂಪ್ರದಾಯದಂತೆ ಮಹಿಳೆಯರಿಗೆ ಬಳೆ, ಅರಿಶಿನ ಕುಂಕುಮವನ್ನು ನೀಡಲಾಗುವುದು ಎಂದರು.
ಸಂಕೀರ್ತನಾ ಯಾತ್ರೆ
ಡಿ.28 ರಂದು ಮಧ್ಯಾಹ್ನ 2 ಕ್ಕೆ ಕಾಮಧೇನು ಗಣಪತಿ ದೇವಸ್ಥಾನದಿಂದ ಸಂಕೀರ್ತನಾ ಯಾತ್ರೆ ಆರಂಭವಾಗಲಿದೆ. ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್‍ನಲ್ಲಿ ಯಾತ್ರೆ ಮುಕ್ತಾಯವಾಗಲಿದ್ದು, ಅಲ್ಲಿ ಮಹಾ ಆರತಿ ನಡೆಯಲಿದೆ. ಪ್ರತಿ ವರ್ಷ ಸಹಸ್ರಾರು ಮಾಲಾಧಾರಿಗಳೊಂದಿಗೆ ನಡೆಯುತ್ತಿದ್ದ ಬೃಹತ್ ಶೋಭಾ ಯಾತ್ರೆಯನ್ನು ಕೋವಿಡ್-19 ನಿಯಮಾವಳಿಗಳ ಹಿನ್ನೆಲೆಯಲ್ಲಿ ಈ ಬಾರಿ ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ದತ್ತ ಪಾದುಕೆಗಳ ದರ್ಶನ
ಡಿ.29 ರಂದು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸುಮಾರು 4 ಸಾವಿರ ಭಕ್ತರು, ಮಾಲಾಧಾರಿಗಳು ದತ್ತಪೀಠಕ್ಕೆ ಭೇಟಿ ನೀಡಲಿದ್ದಾರೆ. ಮಾಲಾಧಾರಿಗಳು ಮಾರ್ಗಮಧ್ಯೆ ಹೊನ್ನಮ್ಮನಹಳ್ಳದಲ್ಲಿ ಮಿಂದು ಕಾಲ್ನಡಿಗೆಯಲ್ಲಿ ಸಂಕೀರ್ತನೆಯೊಂದಿಗೆ ದತ್ತಪೀಠ ತಲುಪಿ ಗುಹಾಂತರ ದೇವಾಲಯದಲ್ಲಿ ದತ್ತಪಾದುಕೆಗಳ ದರ್ಶನ ಪಡೆಯಲಿದ್ದಾರೆ. ನಂತರ ಗಣಪತಿ ಹೋಮ, ದತ್ತಹೋಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಿಲ್ಲಾ ಉಪಾಧ್ಯಕ್ಷ ಪ್ರೇಂಕಿರಣ್, ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್, ನಗರ ಸಂಚಾಲಕ ಕೃಷ್ಣ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss