ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸಚಿವ ಸಿ.ಟಿ.ರವಿ ಸೋಮವಾರ ದತ್ತಪೀಠಕ್ಕೆ ಭೇಟಿ ನೀಡಿ ಪಾದುಕೆಗಳ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಸಾಮಥ್ರ್ಯ ಮತ್ತು ಯೋಗ್ಯತೆಯನ್ನು ಗಳಿಸಿಕೊಡುವಂತೆ ಪೀಠದಲ್ಲಿ ಪ್ರಾರ್ಥಿಸಿದ್ದೇವೆ ಎಂದರು.
ಯಾವುದೆ ಚುನಾವಣೆ ಪೂರ್ವ, ಒಳ್ಳೆಯ ಅವಕಾಶ ಸಿಕ್ಕಿದಾಗ ಅಥವಾ ಜೀವನದಲ್ಲಿ ಸಂಕಷ್ಟ ಎದುರಾದಾಗ ಪೀಠಕ್ಕೆ ಬಂದು ಪೂಜೆ, ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ನಾನು ಭಗವಂತನನ್ನು ನಂಬಿದವನು ಯಾರು ಭಕ್ತಿಯಿಂದ ಬೇಡುತ್ತಾರೊ ಅವರನ್ನು ದತ್ತಾತ್ರೇಯ ರಕ್ಷಿಸುತ್ತಾನೆ ಎನ್ನುವ ನಂಬಿಕೆ ನನ್ನದು ಎಂದರು.
ದತ್ತಮಾಲೆ ಧಾರಣೆ ಮಾಡಿಕೊಂಡು ದತ್ತ ಜಯಂತಿಯಲ್ಲೂ ಪಾಲ್ಗೊಳ್ಳುತ್ತಿದ್ದೇನೆ. ಹಾಗೂ ಕರೊನಾ ಸಂಕಷ್ಟಕ್ಕೊಳಗಾಗಿರುವ ಜನ ಗುಣಮುಖರಾಗಿ ಸಹಜ ಜೀವನ ನಡೆಸುವಂತೆ ಪ್ರಾರ್ಥಿಸಲಾಗಿದೆ ಎಂದರು.
ಪೀಠದ ಗುಹಾಂತರ ದೇವಾಲಯದಲ್ಲಿ ವಿವಿಧ ಶ್ಲೋಕಗಳನ್ನು ಪಠಿಸಿದ ಸಚಿವರು ಮುಜಾವರ್ ಮೂಲಕ ದತ್ತಪಾದುಕೆ ಮತ್ತು ಪೀಠಕ್ಕೆ ಪುಷ್ಪಹಾರ ಸಲ್ಲಿಸಿ. ನಂತರ ಅನುಸೂಯಾದೇವಿ ಪೀಠಕ್ಕೆ ಪುಷ್ಪಾರ್ಪಣೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಜಿಪಂ ಮಾಜಿ ಸದಸ್ಯ ಜೆ.ಡಿ.ಲೋಕೇಶ್, ಮಲ್ಲೇನಹಳ್ಳಿ ಶಿವರಾಜ್, ಗ್ರಾಮಾಂತರ ಪಿಎಸ್ಐ ಗವಿರಾಜ್ ಇತರರು ಇದ್ದರು.
ಸತ್ಯಕ್ಕೆ ಜಯ ಆಗಲೇ ಬೇಕು
ದತ್ತಪೀಠದ ವಿವಾದ ಪರಿಹರಿಸಲು ಅವಕಾಶವಿದ್ದ ಸಂದರ್ಭದಲ್ಲಿ ಅಂದಿನ ಸಿದ್ದರಾಮಯ್ಯನ ನೇತೃತ್ವದ ಸರ್ಕಾರ ಒಂದು ಸಮಿತಿಯನ್ನು ಮಾಡಿ ಹಿಂದುಗಳಿಗೆ ಅನ್ಯಾಯ ಮಾಡಿದ್ದರು. ನಾವು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ. ತೀರ್ಪಿನ ನಿರೀಕ್ಷೆಯಲ್ಲಿದ್ದೇವೆ. ಸತ್ಯಕ್ಕೆ ಜಯ ಆಗಲೇ ಬೇಕು ಎಂದು ಸಿ.ಟಿ.ರವಿ ಹೇಳಿದರು.
ಅಯೋಧ್ಯೆಗೆ ನ್ಯಾಯ ಸಿಗಲು 492 ವರ್ಷ ಬೇಕಾಯಿತು. ದತ್ತಪೀಠಕ್ಕೆ ನ್ಯಾಯ ಸಿಗಲು ಇನ್ನೂ ಕೆಲವು ವರ್ಷ ಬೇಕಾಗುತ್ತದೆ. ನ್ಯಾಯವನ್ನು ಅದುಮಿಡಲು, ಅಲ್ಲಗಳೆಯಲು ಆಗುವುದಿಲ್ಲ. ಸತ್ಯ ಹಿಂದೂಗಳು ಹಾಗೂ ದತ್ತಾತ್ರೇಯ ದೇವರ ಪರವಾಗಿದೆ. ಅದು ಸಿಕ್ಕೇ ಸಿಗುತ್ತದೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಯತ್ನ ಮುಂದುವರಿಸುತ್ತೇವೆ ಎಂದರು.