Tuesday, July 5, 2022

Latest Posts

ದತ್ತಪೀಠದ ಗುಹಾಂತರ ದೇವಾಲಯ ಬಳಿ ಆಜಾನ್, ನಮಾಜು ಮಾಡುವುದನ್ನು ವಿರೋಧಿಸಿ ಏಕಾಂಗಿ ಪ್ರತಿಭಟನೆ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ದತ್ತಪೀಠದ ಗುಹಾಂತರ ದೇವಾಲಯದ ಬಳಿ ಮೈಕ್‍ಗಳನ್ನು ಕಟ್ಟಿ ಆಜಾನ್ ಕೂಗುವುದು ಮತ್ತು ನಮಾಜು ಮಾಡುವುದನ್ನು ವಿರೋಧಿಸಿ ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರು ಮಂಗಳವಾರ ದತ್ತಪೀಠ ಪೊಲೀಸ್ ಠಾಣೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.
ಸಂಘಟನೆ ವತಿಯಿಂದ ದತ್ತಮಾಲೆ ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಸೋಮವಾರ ದತ್ತಪೀಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಮಾಜು ಹಾಗೂ ಆಜಾನ್ ಕೂಗುತ್ತಿರುವುದನ್ನು ಗಮನಿಸಿದ್ದರು. ಇಂದು ಅದೇ ಸಮಯಕ್ಕೆ ಮತ್ತೆ ಭೇಟಿ ನೀಡಿದಾಗಲೂ ಧ್ವನಿವರ್ಧಕಗಳ ಮೂಲಕ ನಮಾಜು ಕೂಗುತ್ತಿದ್ದ ಹಿನ್ನೆಲೆಯಲ್ಲಿ ಪೀಠದಲ್ಲಿರುವ ಪೊಲೀಸ್ ಠಾಣೆ ಎದುರು ಒಬ್ಬರೇ ಪ್ರತಿಭಟನೆ ಕುಳಿತರು.
ಇಲ್ಲಿ ಪ್ರತಿದಿನ ನಮಾಜು ನಡೆಯುತ್ತಿದೆ. ಎರಡು ಧ್ವನಿವರ್ಧಕಗಳನ್ನು ಹಾಕಲಾಗಿದೆ. ಹಿಂದೂಗಳ ಆಚರಣೆಗೆ ಸುಪ್ರೀಂ ಕೋರ್ಟ್ ಆದೇಶಗಳನ್ನು ಹೇಳುತ್ತಾರೆ. ಇಲ್ಲಿ ನೋಡಿದರೆ ಮೈಕ್‍ಗಳನ್ನು ಹಾಕಿ ಆಜಾನ್ ಕೂಗಲಾಗುತ್ತಿದೆ. ಇದರ ವಿರುದ್ಧ ಧರಣಿ ಕುಳಿತಿದ್ದೇನೆ. ದೂರು ಕೇಳಲು ಇಲ್ಲಿ ಯಾವುದೇ ಮುಜುರಾಯಿ ಇಲಾಖೆ ಅಧಿಕಾರಿಗಳಿಲ್ಲ. ಈ ಧೋರಣೆಯನ್ನು ಖಂಡಿಸುತ್ತೇನೆ ಎಂದರು.
ಗಂಗಾಧರ ಕುಲಕರ್ಣಿ ಅವರು ಏಕಾಂಗಿ ಧರಣಿ ನಡೆಸುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮತ್ತಿತರೆ ಕಾರ್ಯಕರ್ತರು ಸಹ ದತ್ತಪೀಠಕ್ಕೆ ತೆರಳಲಿ ಧರಣಿಯಲ್ಲಿ ಪಾಲ್ಗೊಂಡು ನಮಾಜು ಮಾಡಲು ಅವಕಾಶ ನೀಡಕೂಡದು ಎಂದು ಆಗ್ರಹಿಸಿದರು.
ಸ್ವಲ್ಪ ಸಮಯದ ನಂತರ ಮುಜುರಾಯಿ ಅಧಿಕಾರಿ ದರ್ಶನ್ ಮತ್ತು ಗ್ರಾಮಾಂತರ ಠಾಣೆ ವೃತ್ತನಿರೀಕ್ಷ ಗವಿರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ನಮಾಜು ನಿಲ್ಲಿಸುವ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಬೇಕು. ಈ ಸಂಬಂಧ ಅವರು ನಿರ್ಧಾರ ಕೈಗೊಳ್ಳಬೇಕು ಎಂದು ಮನವರಿಕೆ ಮಾಡಲು ಯತ್ನಿಸಿದರು.
ಮೈಕ್ ತೆರವು
ನಮಾಜಿಗಾಗಿ ಕಟ್ಟಲಾಗಿದ್ದ ಮೈಕ್‍ಗಳನ್ನು ಮುಜುರಾಯಿ ಅಧಿಕಾರಿಗಳು, ಪೊಲೀಸರು ತೆರವುಗೊಳಿಸಿದ ನಂತರ ಪ್ರತಿಭಟನೆ ಕೈಬಿಡಲಾಗಿದೆ. ಮುಂದೆ ಅಧಿಕಾರಿಗಳ ಮಟ್ಟದಲ್ಲಿ ಈ ಕುರಿತು ಹೋರಾಟ ಮುಂದುವರಿಸುತ್ತೇವೆ. ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ತಿಳಿಸಿದರು.
ಪೀಠದ ಆವರಣದಲ್ಲಿ ಪೂಜೆ, ಭಜನೆಯಂತಹ ಕಾರ್ಯಕ್ರಮಕ್ಕೂ ಅವಕಾಶ ನೀಡುವುದಿಲ್ಲ. ಆದರೆ ನಮಾಜು ಮಾಡಲು ಅವಕಾಶ ಕೊಟ್ಟಿದ್ದೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ತಾಲ್ಲೂಕು ಅಧ್ಯಕ್ಷ ಜ್ಞಾನೇಂದ್ರ, ನಿರಂಜನ್, ಶರತ್, ಧನುಶ್, ಮನು, ಅಭಿ ಇನ್ನಿತರರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss