ಹೊಸ ದಿಗಂತ ವರದಿ, ಚಿಕ್ಕಮಗಳೂರು:
ದತ್ತಪೀಠದ ಗುಹಾಂತರ ದೇವಾಲಯದ ಹೊರ ಆವರಣದಲ್ಲಿ ಮೈಕ್ ಕಟ್ಟಿ ಆಜಾನ್ ಕೂಗುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲವಾದಲ್ಲಿ ಅದೇ ಜಾಗದಲ್ಲಿ ಮೈಕ್ ಬಳಸಿ ಭಜನೆ ನಡೆಸಲು ನಮಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಮುಖಂಡರು, ಕಾರ್ಯಕರ್ತರು ದತ್ತಪೀಠದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ದತ್ತಮಾಲೆ ಅಭಿಯಾನದ ಅಂಗವಾಗಿ ಪೀಠದ ಆವರಣದಲ್ಲಿ ನಡೆದ ಹೋಮ, ಹವನದಲ್ಲಿ ಭಾಗವಹಿಸಿದ ನಂತರ ಮಾಲಾಧಾರಿಗಳೊಂದಿಗೆ ಮುಖಂಡರು ಸ್ಥಳದಲ್ಲೇ ಧರಣಿ ಕುಳಿತು ನಮಗೂ ದತ್ತಗುಹೆಯ ಆವರಣದಲ್ಲಿ ಮೈಕ್ ಕಟ್ಟಿ ಭಜನೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ನಂತರ ಅಲ್ಲಿಂದ ಮತ್ತೆ ಆಜಾನ್ ಹಾಗೂ ನಮಾಜು ನಡೆಸುತ್ತಿದ್ದ ಜಾಗಕ್ಕೆ ತೆರಳಿ ಪ್ರತಿಭಟಿಸಲು ಮುಂದಾದಾಗ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಮುಜರಾಯಿ ಇಲಾಖೆ ಅಧಿಕಾರಿ ಶ್ರೀನಿವಾಸ್, ಎಡಿಸಿ ಡಾ.ಕುಮಾರ್ ಹಾಗೂ ಎಸ್ಪಿ ಎಚ್.ಎಂ.ಅಕ್ಷಯ್ ಮನವೊಲಿಸುವ ಪ್ರಯತ್ನ ಫಲ ನೀಡಲಿಲ್ಲ. ಜಿಲ್ಲಾಕಾರಿ ಸ್ಥಳಕ್ಕೆ ಬರಬೇಕು. ಆಜಾನ್ ಕೂಗಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪಟ್ಟುಹಿಡಿದರು.
ಅಲ್ಲದೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಜೇವರ್ಗಿ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ಕಾಳಿ ಮಠದ ಶ್ರೀ ರಿಷಿಕುಮಾರ ಸ್ವಾಮೀಜಿ, ದುರ್ಗಾ ಸೇನೆಯ ಜಿಲ್ಲಾದ್ಯಕ್ಷೆ ಶಾರದಮ್ಮ ಸೇರಿದಂತೆ ಇತರೆ ಮುಖಂಡರು ಹಾಗೂ ಕಾರ್ಯಕರ್ತರು ಆಜಾನ್ ಮತ್ತು ನಮಾಜು ನಡೆಸಿದ ನಿಷೇಧಿತ ಪ್ರದೇಶಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಸ್ವಲ್ಪ ಸಮಯದ ನಂತರ ಜಿಲ್ಲಾಕಾರಿ ಡಾ. ಎಸ್.ಬಗಾದಿ ಗೌತಮ್ ಸ್ಥಳಕ್ಕಾಗಮಿಸಿದರು. ಈ ವೇಳೆ ನಮಾಜು ಮಾಡಿದವರ ವಿರುದ್ಧ ಕೇಸು ದಾಖಲಿಸಬೇಕು. ಇಲ್ಲದಿದ್ದರೆ ನಮಗೂ ಈಗ ಮೈಕ್ ಬಳಸಿ ಭಜನೆ ಮಾಡಲು ಅವಕಾಶ ನೀಡಿ ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ವಿವಾದಿತ ಪ್ರದೇಶದಲ್ಲಿ ನ್ಯಾಯಾಲಯದ ಆದೇಶದಂತೆ ಯಥಾಸ್ಥಿತಿ ಕಾಪಾಡಬೇಕಿದೆ. ಯಾವುದೇ ಉಲ್ಲಂಘನೆ ಮಾಡುವಂತಿಲ್ಲ.ಇಲ್ಲಿ ನಮಾಜು ಮಾಡಿರುವ ಬಗ್ಗೆ ಬುಧÀವಾರ ನನಗೆ ಮನವಿ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೀರಿ. ಹೀಗಾಗಿ ನ್ಯಾಯಾಲಯ ಮತ್ತು ಮುಜರಾಯಿ ಇಲಾಖೆ ಆದೇಶ ಮತ್ತಿತರೆ ದಾಖಲೆ ಪರಿಶೀಲಿಸಿ ವರದಿ ನೀಡಲು ಸಂಬಂಸಿದ ಅಕಾರಿಗಳಿಗೆ ಸೂಚಿಸಿದ್ದೇನೆ. ಇದು ಸೂಕ್ಷ್ಮ ವಿಚಾರ ಆಗಿರುವುದರಿಂದ ಎಲ್ಲ ಪರಶೀಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ನಮಾಜು ಮಾಡಿರುವ ಬಗ್ಗೆ ದೂರು ಕೊಡಿ ಮುಂದೆ ಪರಿಶೀಲಿಸಿ ತಪ್ಪು ಮಾಡಿದ್ದರೆ ಪೆÇಲೀಸ್ ಅಕಾರಿಗಳ ವಿರುದ್ಧವೂ ಕ್ರಮ ಆಗುತ್ತದೆ ಎಂದು ತಿಳಿಸಿದರು.
ಇದಕ್ಕೆ ಒಪ್ಪಿದ ಕಾರ್ಯಕರ್ತರು ಡಿಸೆಂಬರ್ 8 ರೊಳಗಾಗಿ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗಡುವು ನೀಡಿ ಪ್ರತಿಭಟನೆ ಕೈಬಿಟ್ಟರು.